ವಿಜಯಸಾಕ್ಷಿ ಸುದ್ದಿ, ಗದಗ : ಕೊಣ್ಣೂರಿನ ಪರಮೇಶ್ವರ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇದು 1600 ವರ್ಷಗಳ ಹಿಂದೆ ನಡೆದ ಯುದ್ಧದ ಗೆಲುವಿನ ಸವಿನೆನಪಿಗಾಗಿ ನಿರ್ಮಿಸಲಾದ ದೇವಸ್ಥಾನ. ದೇವಸ್ಥಾನ ಮೂಲ ಆಕೃತಿಗೆ ಧಕ್ಕೆ ಬಾರದಂತೆ, ನಮ್ಮತನವನ್ನು ಉಳಿಸುವ ಸ್ಮಾರಕವಾಗಿ ರೂಪಗೊಳ್ಳಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲಾಡಳಿತ, ಪ್ರವಾಸೋದ್ಯಮ ಮತ್ತು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರುಗಳ ಸಹಯೋಗದಲ್ಲಿ ರೂ. 150 ಲಕ್ಷಗಳ ವೆಚ್ಚದ ಅನುದಾನದಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ಶ್ರೀ ಪರಮೇಶ್ವರ ದೇವಾಲಯದ ಸಂರಕ್ಷಣಾ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಇತಿಹಾಸವೇ ಹೇಳುವಂತೆ ಯುದ್ಧದ ವಿಜಯದ ಗೆಲುವಿಗಾಗಿ ನಿರ್ಮಿಸಲಾದ ಪರಮೇಶ್ವರ ದೇವಸ್ಥಾನ ನಮ್ಮೆಲ್ಲರ ಹೆಮ್ಮೆ. ವಿಜಯನಗರ ಅರಸರಿಗೆ ತೂಕದಾನ ಮಾಡಿದ ಇತಿಹಾಸ ಇಲ್ಲಿದೆ. ಜೀರ್ಣೋದ್ಧಾರದ ವೇಳೆ ಮೂಲ ದೇವಸ್ಥಾನ ಹಾಗೂ ಶಿಲಾಶಾಸನಗಳಿಗೆ ಧಕ್ಕೆಯಾಗದಂತೆ ನಿರ್ಮಿಸಲಾಗುವುದು. ಕೊಣ್ಣೂರಿನ ಗ್ರಾಮಸ್ಥರಿಗೆ ಈ ದೇವಸ್ಥಾನ ನಮ್ಮದು ಎಂಬ ಭಾವನೆ ಬಂದರೆ ಖಂಡಿತವಾಗಿಯೂ ಸುಂದರವಾಗಿ ನಿರ್ಮಾಣವಾಗಲಿದೆ.
ಸಾರ್ವಜನಿಕರ ಸಹಕಾರದಿಂದ ಮಾತ್ರವೇ ಜೀರ್ಣೋದ್ಧಾರ ಪೂರ್ಣ ಆಗಲಿದೆ ಎಂದು ನುಡಿದರು.
ದೇವಾಲಯದ ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸುವುದು, ದೇವಸ್ಥಾನದ ಮೇಲಿನ ಜಲ ನಿರೋಧಕ ಹೊದಿಕೆ ದುರಸ್ತಿಗೊಳಿಸುವುದು, ದೇವಾಲಯದ ಶಿಥಿಲ ಕಲ್ಲುಗಳನ್ನು ತೆಗೆದು ಹೊಸದಾಗಿ ಹಾಕಲಾಗುವುದು.
ಹಳೆ ಹಾಗೂ ಹೊಸ ಕಲ್ಲು ಜೋಡಿಸಿ ಮರು ನಿರ್ಮಾಣ ಕೈಗೊಳ್ಳುವುದು, ವಿಮಾನ ಗೋಪುರ ನಿರ್ಮಾಣ, ನೆಲಹಾಸು ಸೇರಿದಂತೆ ಸುತ್ತಲೂ ಚೈನ್ ಲಿಂಕ್ ಮಾಡಲಾಗುವುದು. ದೇವಸ್ಥಾನದ ಇತಿಹಾಸ-ಶಾಸನಗಳ ಜೊತೆಗೆ ಕನ್ನಡ ಫಲಕ ಹಾಕಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಜೀರ್ಣೋದ್ಧಾರ ಕಾಮಗಾರಿಗಳನ್ನು ವಿವರಿಸಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಈ ತಿಂಗಳು 2 ದೊಡ್ಡ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಲಕ್ಕುಂಡಿ ದೇವಸ್ಥಾನಗಳ ಅಭಿವೃದ್ಧಿಗಾಗಿ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜೊತೆಗೆ ಇಂದು ಕೊಣ್ಣೂರಿನ ಪರಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ 1.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಇದಕ್ಕೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರಿಗೆ ಅಭಿನಂದನೆಗಳು ಎಂದರು.
ದೇವಸ್ಥಾನದ ಅಭಿವೃದ್ಧಿಯ ಮೂಲಕ ಈ ಗ್ರಾಮದ ಸಾರ್ವಜನಿಕರಲ್ಲಿ ಸಹಭಾಗಿತ್ವ ಸೌಹಾರ್ದಯುತ ವಾತಾವರಣ ಇನ್ನಷ್ಟು ಬಲಗೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಶಿವಕುಮಾರ ಶ್ರೀಗಳು ಹಾಗೂ ಡಾ. ಶಿವಾನಂದ ಶ್ರೀಗಳು, ಬೈರನಹಟ್ಟಿ ಶ್ರೀಗಳು, ಕಲ್ಮಠದ ಸಿದ್ದಲಿಂಗ ಶ್ರೀಗಳು ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಸಿದ್ದವ್ವ ಬಸವರಾಜ್ ಕಳಸಣ್ಣನವರ್, ರಾಜೂಗೌಡ ಕೆಂಚನಗೌಡ್ರ, ಶೇಖರಗೌಡ, ನಿಂಗಪ್ಪ ವಜ್ರಂಗಿ, ಜಕ್ಕಪ್ಪನವರ, ಬಾಬುಗೌಡ್ರ, ಸೋಮಾಪೂರ ಸೇರಿದಂತೆ ಇತರರು ಇದ್ದರು.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಬೆಣ್ಣೆಹಳ್ಳ ಪ್ರವಾಹ ನಿರ್ಬಂಧಿಸುವುದು ಹಾಗೂ ಬೆಣ್ಣೆಹಳ್ಳ ಆಳ ಹೆಚ್ಚಿಸುವ ಕಾಮಗಾರಿಗೆ 200 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಬೆಣ್ಣೆ ಹಳ್ಳ ಪ್ರದೇಶದ ವ್ಯಾಪ್ತಿಯ ರೈತರಿಗೆ ಸಹಕಾರಿಯಾಗಲಿದೆ. ಬೆಣ್ಣೆ ಹಳ್ಳದ ನೀರನ್ನು ಸಮರ್ಪಕವಾಗಿ ಬಳಕೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.