ವಿಜಯಸಾಕ್ಷಿ ಸುದ್ದಿ, ,ಗದಗ: ಹಿಂಸೆಯನ್ನು ತ್ಯಾಗಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಕಲ ಜೀವರಾಶಿಗಳ ರಕ್ಷಣೆಗೆ ನೆರವಾಗುತ್ತ ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ ಸಂಯಮ ಧರ್ಮವಾಗಿದ್ದು, ಸಂಯಮ ಇಲ್ಲದವರು ಕ್ರೋಧಿತ ಮತ್ತು ವಿವೇಕರಹಿತರಾಗಿ ಹಿಂಸೆಯಲ್ಲಿ ತೊಡಗುತ್ತಾರೆಂದು ಜಯಶ್ರೀ ಎಫ್.ಬರಿಗಾಲಿ ಹೇಳಿದರು.
ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ಪ್ರಯುಕ್ತ ಲಕ್ಷ್ಮೇಶ್ವರದ ಅನಂತನಾಥ ತ್ರಿಕೂಟ ಬಸದಿಯಲ್ಲಿ ಆಯೋಜಿಸಿದ್ದ ‘ಉತ್ತಮ ಸಂಯಮ ಧರ್ಮ’ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕೆಲವರು ಕ್ಷಣಿಕ ಸುಖಕ್ಕಾಗಿ ಸಂಯಮ ರಹಿತರಾಗಿ ಅಗಾಧವಾದ, ದೀರ್ಘವಾದ ದುಃಖವನ್ನು ಅನುಭವಿಸುತ್ತಾರೆ. ಸಂಯಮವು ಆದರ್ಶ ಬದುಕಿಗೆ ಭೂಷಣವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ಟಿ. ಬರಿಗಾಲಿ ಮಾತನಾಡಿ, ಸಂಯಮವAತರು ಸಾಧಕ-ಬಾಧಕಗಳನ್ನು ಚೆನ್ನಾಗಿ ಅರಿತು ಸಾಧಕ ಅಂಶಗಳನ್ನು ಮಾತ್ರ ಸ್ವೀಕರಿಸಿ ತಮ್ಮ ಕಾರ್ಯದಲ್ಲಿ ಜಯಶಾಲಿಯಾಗುತ್ತಾರೆ. ಇಂಥವರು ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆಂದು ಹೇಳಿದರು.
ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, ಸಂಘವು ಕಳೆದ 22 ವರ್ಷಗಳಿಂದ ಧಾರ್ಮಿಕ-ಸಾಮಾಜಿಕ ಕಾರ್ಯಗಳಲ್ಲಿ ನಿರತವಾಗಿದ್ದು, ಧರ್ಮ ಬಾಂಧವರು ಉದಾರವಾಗಿ ದಾನ ನೀಡಬೇಕೆಂದು ನಿವೇದಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಸ್. ನಾವಳ್ಳಿ, ಯಶವಂತ ಸಿದ್ದಣ್ಣವರ, ಹನಮಂತಗೌಡ ಮತಗಟ್ಟಿ, ಆರ್.ಸಿ. ಪಾಟೀಲ, ಬಿ.ಎಸ್. ಘೊಂಗಡಿ, ಸಂತೋಷ ಗೋಗಿ, ವಾಸು ಪಾಟೀಲ, ಬ್ರಹ್ಮರಾಜ ಹೊಂಬಣ್ಣವರ ಸೇರಿದಂತೆ ಸ್ಥಳೀಯ ಜೈನ ಸಮಾಜದ ಪ್ರಮುಖರು, ಶ್ರಾವಕರು, ಶ್ರಾವಿಕೆಯರು ಪಾಲ್ಗೊಂಡಿದ್ದರು.



