ಚಿಕ್ಕಮಗಳೂರು:- ನ.9ರಿಂದ 11ರವರೆಗೆ ಮುಳ್ಳಯ್ಯನಗಿರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲೆಯಲ್ಲಿ ಶ್ರೀರಾಮಸೇನೆ ಸಂಘಟನೆ ವತಿಯಿಂದ ನ.4ರಿಂದ 10ರವರೆಗೆ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ನ.10ರಂದು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಾಹನಗಳ ಮುಖಾಂತರ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಗೆ ಆಗಮಿಸಲಿದ್ದಾರೆ.
ದರ್ಗಾಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು, ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಿಂದ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುವ ಸಂಭವವಿರುವುದರಿಂದ ನ.9ರ ಬೆಳಗ್ಗೆ 6ರಿಂದ ನ.11 ರ ಬೆಳಗ್ಗೆ 6ರವರೆಗೆ ಯಾವುದೇ ಪ್ರವಾಸಿಗರು, ಯಾತ್ರಾರ್ಥಿಗಳು ಇಲ್ಲಿಗೆ ಬರುವುದು, ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ದತ್ತಮಾಲಾಧಾರಿಗಳು,
ಶ್ರೀರಾಮಸೇನಾ ಮುಖಂಡರು/ಕಾರ್ಯಕರ್ತರು ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಬರುವ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವವರು ಮತ್ತು ಈಗಾಗಲೇ ಹೋಮ್ ಸ್ಟೇ/ರೆಸಾರ್ಟ್‌ಗಳನ್ನು ಬುಕ್ಕಿಂಗ್ ಮಾಡಿಕೊಂಡವರುಗಳನ್ನು ಹೊರತು ಪಡಿಸಿ ಇತರೆ ಯಾವುದೇ ಪ್ರವಾಸಿಗರು ಯಾತ್ರಾರ್ಥಿಗಳು ಬರುವುದನ್ನು / ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.