ಗದಗ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗದಗ ಜಿಲ್ಲೆ ಈ ಬಾರಿ ಮತ್ತೊಮ್ಮೆ ಹಿನ್ನಡೆಯನ್ನು ಅನುಭವಿಸಿದೆ. ಕಳೆದ ವರ್ಷ ಅಲ್ಪ ಮಟ್ಟಿನ ಏರಿಕೆ ಕಂಡಿದ್ದ ಫಲಿತಾಂಶ, ಈ ಬಾರಿ ಮತ್ತೆ ಕುಸಿತ ಕಂಡಿರುವುದು ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ.
2024ರಲ್ಲಿ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದ್ದ ಗದಗ ಜಿಲ್ಲೆ, 2025ರಲ್ಲಿ 25ನೇ ಸ್ಥಾನಕ್ಕೆ ಏರಿಕೆಯಾಗಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ 2026ರಲ್ಲಿ ಮತ್ತೆ 30ನೇ ಸ್ಥಾನಕ್ಕೆ ಜಾರುವ ಮೂಲಕ, ಜಿಲ್ಲೆ ತನ್ನ ಪ್ರದರ್ಶನವನ್ನು ಸ್ಥಿರಗೊಳಿಸಲು ವಿಫಲವಾಗಿದೆ.
ಇದ್ರಲ್ಲೂ ಗಮನಾರ್ಹ ವಿಷಯವೆಂದರೆ, ಈ ಬಾರಿ ಜಿಲ್ಲೆಯಲ್ಲಿ ಶೇಕಡಾವಾರು ಉತ್ತೀರ್ಣತೆ ಶೇ. 76.65 ದಾಖಲಾಗಿದ್ದು, ಕಳೆದ ವರ್ಷದ ಶೇ. 66.64 ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ರಾಜ್ಯದ ಇತರೆ ಜಿಲ್ಲೆಗಳ ಉತ್ತಮ ಸಾಧನೆಯ ಹಿನ್ನೆಲೆ ಗದಗ ಜಿಲ್ಲೆಯ ರ್ಯಾಂಕಿಂಗ್ ಕುಸಿತ ಕಂಡಿದೆ. ರಾಜ್ಯಮಟ್ಟದ ಒಟ್ಟಾರೆ ಉತ್ತೀರ್ಣ ಪ್ರಮಾಣ ಏರಿಕೆಯಾದುದು ಮಾತ್ರ ಸ್ವಲ್ಪ ಸಮಾಧಾನ ತಂದಿದೆ.
ಕಳೆದ ನಾಲ್ಕು ವರ್ಷದ ಪಿಯು ಫಲಿತಾಂಶ
- 2025-26 76.65% 30
- 2024-25 66.64% 25
- 2023-24 72.86% 32
- 2022-23 66.91% 30
ಇನ್ನೂ ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಬಿ. ಮಸನಾಯಕ ಪ್ರತಿಕ್ರಿಯೇ ನೀಡಿದ್ದು, ಈ ಬಾರಿ ಶೇಕಡಾವಾರು ಉತ್ತೀರ್ಣತೆ ಏರಿಕೆಯಾದರೂ, ರಾಜ್ಯಮಟ್ಟದ ರ್ಯಾಂಕಿಂಗ್ನಲ್ಲಿ ಗದಗ ಜಿಲ್ಲೆ ಕುಸಿತ ಕಂಡಿದೆ. ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಮಟ್ಟದ ಫಲಿತಾಂಶ ದೊರಕಿಲ್ಲ. ಈ ಬಗ್ಗೆ ಸಮಗ್ರ ಆತ್ಮಾವಲೋಕನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.



