ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲದಲ್ಲಿ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದವರು ನಾಟಕ ಪ್ರದರ್ಶನ ಮಾಡುತ್ತಿರುವ ಸುದ್ದಿಯನ್ನು ತಿಳಿದ ನಿವೃತ್ತ ಸೈನಿಕರು ಅವರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ, ಕಲಾವಿದರು ನಮ್ಮ ನಾಡಿನ ಆಸ್ತಿಯಿದ್ದಂತೆ. ಅವರನ್ನು ಸಲುಹಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪತ್ರಿಕೆಯಲ್ಲಿ ಕಲಾವಿದರ ಶೋಚನೀಯ ಬದುಕಿನ ಬಗ್ಗೆ ಓದಿದ ನಂತರ ನಮ್ಮೆಲ್ಲ ಸ್ನೇಹಿತರೊಂದಿಗೆ ಮಾತನಾಡಿದೆ. ಅವರೆಲ್ಲರೂ ಉದಾರ ಮನದ ಸಹಾಯವನ್ನು ನೀಡಿ ಸಂಘಕ್ಕೆ ತಮ್ಮ ಅಲ್ಪ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಇಲ್ಲಿಗೆ ಬಂದ ಕಲಾವಿದರು ಬರಿಗೈಯಲ್ಲಿ ಮರಳಬಾರದು. ಆದ್ದರಿಂದ ಪಟ್ಟಣದ ಮತ್ತು ಸುತ್ತಲಿನ ಗ್ರಾಮಗಳ ವಿವಿಧ ಸಂಘ-ಸಂಸ್ಥೆಗಳವರು ತಮ್ಮ ಕೈಯಿಂದಾದ ಸಹಾಯ ಮಾಡಿ, ನಾಟಕವನ್ನು ನೋಡಿ ಪ್ರೋತ್ಸಾಹಿಸಬೇಕೆಂದರು.
ಧನ ಸಹಾಯ ಸ್ವೀಕರಿಸಿದ ಮಾಲಕಿ ಭಾರತಿ ಬಾಗಲಕೋಟಿ ಮಾತನಾಡಿ, ನಿವೃತ್ತ ಸೈನಿಕ ಸಂಘದವರು ನಮ್ಮ ಮೇಲೆ ಕರುಣೆ ತೋರಿಸಿ ಇಲ್ಲಿಯವರೆಗೆ ಬಂದು ನಮಗೆ ಧನ ಸಹಾಯ ಮಾಡಿದ್ದನ್ನು ನಾವೆಂದಿಗೂ ಮರೆಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕುಮಾರಸ್ವಾಮಿ ಕೋರಧಾನ್ಯಮಠ, ರಾಮಪ್ಪ ರೋಣದ, ಉಮೇಶ್, ದಿನೇಶ್ ಕೋಗಿಲೆ, ಸಂಗಪ್ಪ ಕುಷ್ಟಗಿ, ಪ್ರಭುದೇವ ಮುಕ್ಕನಗೌಡರ, ಉಮೇಶ್ ಕರಮುಡಿ, ಗುರುಶಾಂತಗೌಡ ಮಲ್ಲನಗೌಡರ, ಮಂದಾಲಪ್ಪ ಸಂಗನಾಳ, ಶಿವಪ್ಪ ಶಿವಾಪುರ, ಮಲ್ಲಿಕಾರ್ಜುನ ಮಲ್ಲನಗೌಡರ, ಸಿದ್ರಾಮಪ್ಪ ಕಟ್ಟಿಮನಿ, ದಾವಲಸಾಬ ಕಿಲ್ಲೇದಾರ, ಮಲ್ಲಪ್ಪ ಕಡೆತೋಟದ, ಬಸವರಾಜ ಕಡೆತೋಟದ, ಜಿ.ಎಸ್. ಮಲ್ಲನಗೌಡರ, ರೇವಣಸಿದ್ದಪ್ಪ ನರಗುಂದ, ಈರಪ್ಪ ದೊಡ್ಡಣ್ಣವರ, ಶಿವಾನಂದ, ಎಂ.ಬಿ. ಕಡೆತೋಟದ, ಬಸವೇಶ್ವರ ಚಿಕ್ಕೊಪ್ಪದ, ಕರಡಿ ಇನ್ನಿತರರಿದ್ದರು.