ವಿಜಯಸಾಕ್ಷಿ ಸುದ್ದಿ, ರೋಣ : ಸರಕಾರಿ ನೌಕರರಲ್ಲಿ ಸಮಯಪಾಲನೆಯಿದ್ದಾಗ ಮಾತ್ರ ಪ್ರಾಮಾಣಿಕತೆ ಬರಲು ಸಾಧ್ಯ ಎಂದು ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಹಿತ್ತಲ್‌ಗುತ್ತಿ ಹೇಳಿದರು.
ಅವರು ಬುಧವಾರ ತಾ.ಪಂ ಸಭಾಭವನದಲ್ಲಿ ಜರುಗಿದ ತಮ್ಮ ಸೇವಾ ನಿವೃತ್ತಿಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಯಕ್ಕೆ ಮಹತ್ವ ಕೊಟ್ಟಾಗ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎನ್ನುವ ಸತ್ಯವನ್ನು ಅರಿಯಬೇಕು. ಅಂದಾಗ ಮಾತ್ರ ಪ್ರಾಮಾಣಿಕತೆ ತಾನಾಗಿಯೇ ಬರುತ್ತದೆ. ಸರಕಾರಿ ನೌಕರನಾಗಿ 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಸರಕಾರ ಜಾರಿಗೆ ತಂದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ಮುಟ್ಟಿಸಿದರೆ ನಮಗೆ ನೆಮ್ಮದಿ ಸಿಗುತ್ತದೆ ಎಂಬ ಭಾವನೆ ಪ್ರತಿ ನೌಕರರಲ್ಲಿ ಬಂದಾಗ ಸಮಸ್ಯೆಗಳು ದೂರಾಗುತ್ತವೆ ಎಂದರು.
ಎಸ್.ಎಸ್. ಹಿತ್ತಲ್‌ಗುತ್ತಿ ಅವರನ್ನು ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್‌ಡಬ್ಲುಎಸ್ ಇಇ ಚಂದ್ರಕಾಂತ ವಹಿಸಿದ್ದರು.
ಎಂ.ಡಿ. ತೋಗುಣಸಿ, ಎಸ್.ನಿಲಗುಂದ, ಎಂ.ಎಸ್. ಪಾಟೀಲ, ಎಂ.ಮಹದೇವಪ್ಪ, ಶಂಕರಗೌಡ ಪಾಟೀಲ, ಪ್ರವೀಣ ಚೋಳಿನ, ಎಂ.ಕೇಸರಿ, ಎಸ್.ಎಂ. ಪಲ್ಲೇದ ಸೇರಿದಂತೆ ಗುತ್ತಿಗೆದಾರರು ಉಪಸ್ಥಿತರಿದ್ದರು. ಪ್ರಭು ಸೋಮನಕಟ್ಟಿ ನಿರೂಪಿಸಿ ವಂದಿಸಿದರು.