ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಫಾರ್ಮ್ ಕಳೆದುಕೊಂಡಿದ್ದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ.
ರಣಜಿ ಆಡುತ್ತಿರುವ ಟೀಮ್ ಇಂಡಿಯಾ ಆಟಗಾರರಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಮಿಂಚಿನ ದಾಳಿ ನಡೆಸಿದ್ದಾರೆ. ಸೌರಾಷ್ಟ್ರ ಪರ ಆಡುತ್ತಿರುವ ರವೀಂದ್ರ ಜಡೇಜಾ ಡೆಲ್ಲಿ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಜಡೇಜಾ ಡೆಲ್ಲಿ ವಿರುದ್ಧ 17.4 ಓವರ್ ಬೌಲ್ ಮಾಡಿ ಕೇವಲ 66 ರನ್ ನೀಡಿ ಐದು ವಿಕೆಟ್ ಪಡೆದರು.
ಜಡೇಜಾ ಡೆಲ್ಲಿ ಮೇಲೆ ಎಂತಹ ಒತ್ತಡವನ್ನು ಸೃಷ್ಟಿಸಿದರು ಎಂದರೆ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 188 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಷಬ್ ಪಂತ್ ಕೂಡ ಡೆಲ್ಲಿ ತಂಡದಲ್ಲಿ ಆಡುತ್ತಿದ್ದರು ಆದರೆ ಅವರ ಉಪಸ್ಥಿತಿಯು ಈ ತಂಡಕ್ಕೆ ಹೆಚ್ಚು ನೆರವಾಗಲಿಲ್ಲ ಎಂಬುದು ದೊಡ್ಡ ವಿಷಯ. 10 ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ರಿಷಬ್ ಪಂತ್ ಔಟಾದರು.
ರವೀಂದ್ರ ಜಡೇಜಾ ತಮ್ಮ ಮೊದಲ ಬೇಟೆಯಾಗಿ ಸನತ್ ಸಂಗ್ವಾನ್ ಅವರನ್ನು ಬಲಿ ಪಡೆದರೆ, ಇದಾದ ಬಳಿಕ 44 ರನ್ ಗಳಿಸಿ ಕ್ರೀಸ್ನಲ್ಲಿದ್ದ ಯಶ್ ಧುಲ್ ಅವರ ವಿಕೆಟ್ ಕೂಡ ಪಡೆದರು. ಮೂರನೇ ವಿಕೆಟ್ ಆಗಿ ಜಡೇಜಾ ಡೆಲ್ಲಿ ನಾಯಕ ಆಯುಷ್ ಬಧೋನಿಯನ್ನೂ ಬಲಿಪಶು ಮಾಡಿದರು. ಆ ನಂತರವೂ ಮ್ಯಾಜಿಕ್ ಮಾಡಿದ ಜಡೇಜಾ, ಹರ್ಷ್ ತ್ಯಾಗಿ ಮತ್ತು ನವದೀಪ್ ಸೈನಿ ಅವರ ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಆ ಮೂಲಕ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 35 ನೇ ಬಾರಿಗೆ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳನ್ನು ಪಡೆದ ಸಾಧನೆಯನ್ನು ಸಾಧಿಸಿದರು.
ಜಡೇಜಾ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 547 ವಿಕೆಟ್ಗಳನ್ನು ಪಡೆದಿದ್ದಾರೆ. ಇದೀಗ ಈ ದೇಶೀ ಟೂರ್ನಿಯಲ್ಲಿ ಜಡೇಜಾ 550 ವಿಕೆಟ್ಗಳ ಮೈಲಿಗಲು ದಾಟಲು ಕೇವಲ ಮೂರು ವಿಕೆಟ್ಗಳ ದೂರದಲ್ಲಿದ್ದಾರೆ. ರವೀಂದ್ರ ಜಡೇಜಾ 2023ರಲ್ಲಿ ತಾವು ಆಡಿದ್ದ ಕೊನೆಯ ರಣಜಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 53 ರನ್ಗಳಿಗೆ 7 ವಿಕೆಟ್ ಪಡೆದಿದ್ದರು.
ವಾಸ್ತವವಾಗಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಜಡೇಜಾರನ್ನು ಹೊರತುಪಡಿಸಿ ಮಿಕ್ಕವರ್ಯಾರು ಉತ್ತಮ ಪ್ರದರ್ಶನ ನೀಡಿಲ್ಲ ಎನ್ನಲಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಅನುಭವಿಸಿದ ನಂತರ ಬಿಸಿಸಿಐ ಎಚ್ಚರಿಕೆ ಮೇರೆಗೆ ರಣಜಿ ಟ್ರೋಫಿ ಆಡುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಮೊದಲ ದಿನವೇ ನಿರಾಸೆ ಮೂಡಿಸಿದ್ದಾರೆ. ರೋಹಿತ್, ಪಂತ್, ಗಿಲ್ ಹಾಗೂ ಜೈಸ್ವಾಲ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ.