ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಪೌತಿ ಆ್ಯಪ್ ಮೂಲಕ ಪೈಲೆಟ್ ಯೋಜನೆ ಜಾರಿಯಲ್ಲಿದ್ದು, ಇದರ ಪ್ರಗತಿ ಇನ್ನಷ್ಟು ಹೆಚ್ಚಿಸಬೇಕು. ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಗೊಳ್ಳಬೇಕು ಮತ್ತು ಈ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಅವರು ಗದಗ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮಾತನಾಡಿದರು.
ಮುಂದಿನ ವರ್ಷದಿಂದ ಜಮಾಬಂದಿ ಕಾರ್ಯವೂ ಆನ್‌ಲೈನ್ ಮೂಲಕ ಜಾರಿಯಾಗಲಿದ್ದು, ಇದಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪೂರ್ವಸಿದ್ಧತೆ ಕೈಗೊಳ್ಳಬೇಕು. ಸರ್ವೇ ಕಾರ್ಯವನ್ನು ಸಂಪೂರ್ಣ ಕಾಗದರಹಿತಗೊಳಿಸುವುದು ಸರ್ಕಾರದ ಬದ್ಧತೆ. ಇನ್ನು ಮುಂದೆ ಸರ್ವೇ ಸ್ಕೆಚ್‌ಗಳು ಡಿಜಿಟಲ್ ರೂಪದಲ್ಲೇ ಇರಬೇಕು ಎಂದು ಸೂಚಿಸಿದರು.
ದಾಖಲೆಗಳ ಸ್ಕ್ಯಾನಿಂಗ್ ಮತ್ತು ಅಪ್ಲೋಡ್ ಕಾರ್ಯ ಶೇ.48ರಷ್ಟು ಮಾತ್ರ ಪೂರ್ಣಗೊಂಡಿರುವುದರಿಂದ ಅದನ್ನು ವೇಗಗೊಳಿಸಬೇಕು. ಪೌತಿ ಕಾರ್ಯ, ಭೂ ಸುರಕ್ಷಾ ಯೋಜನೆ, ಲ್ಯಾಂಡ್ ಬೀಟ್, ಜಮಾಬಂದಿ, ಹಿಡುವಳಿ ಜಮೀನು ಪೋಡಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉತಾರ ಸೇರಿ ಎಲ್ಲ ದಾಖಲೆಗಳು ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವ ವ್ಯವಸ್ಥೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ಕಂದಾಯ ಗ್ರಾಮಗಳ ಪ್ರಸ್ತಾವನೆ ಸಲ್ಲಿಕೆಗೆ ಮಾರ್ಚ್ 16 ಕೊನೆಯ ದಿನವಾಗಿದ್ದು, ಅದರೊಳಗೆ ಎಲ್ಲಾ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿಯಲ್ಲಿ ಜನರಿಗೆ ಎಲ್ಲಾ ಸೇವೆಗಳು ಸರಿಯಾಗಿ ಲಭ್ಯವಾಗಬೇಕು. ಈಗಾಗಲೇ ಅವರಿಗೆ ಪ್ರತ್ಯೇಕ ಕಚೇರಿಗಳನ್ನು ಗುರುತಿಸಿ ನೀಡಲಾಗಿದೆ. ಆದರೂ ಗ್ರಾಮ ಲೆಕ್ಕಾಧಿಕಾರಿಗಳು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಇಂತಹ ಪರಿಸ್ಥಿತಿ ಮರುಕಳಿಸದಂತೆ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರು ಮಾತನಾಡಿ, ರಾಜ್ಯದ 43 ಇಲಾಖೆಗಳಲ್ಲಿ ಕೇವಲ 3-4 ಇಲಾಖೆಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬ ವರದಿಯಲ್ಲಿ ಕಂದಾಯ ಇಲಾಖೆಯೂ ಒಂದು ಎಂದು ಉಲ್ಲೇಖವಾಗಿದೆ. ಕಂದಾಯ ಸಚಿವರ ಕ್ರಿಯಾಶೀಲ ಕಾರ್ಯದಿಂದ ಇದು ಸಾಧ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಪೂರಕವಾಗಿ ಕಂದಾಯ ಇಲಾಖೆಯ ಡಿಜಿಟಲೀಕರಣ ಉತ್ತಮ ಹೆಜ್ಜೆಯಾಗಿದ್ದು ಅಭಿನಂದನೀಯ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಭೆಗೆ ಅಂಕಿ-ಅಂಶಗಳೊಂದಿಗೆ ಪ್ರಗತಿ ವಿವರಿಸಿದರು. ಪ್ರಗತಿ ಸಾಧಿಸದಿರುವ ಯೋಜನೆಗಳಲ್ಲಿನ ಅಡಚಣೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಡಿಡಿಎಲ್‌ಆರ್ ರುದ್ರಣ್ಣಗೌಡ ಜಿ.ಜೆ, ಎಸಿ ಗಂಗಪ್ಪ ಎಂ, ತಾಲೂಕು ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
ಗದಗ ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಕಾರ್ಯ ಶೇ. 85.62ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಶೇ.100 ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಬೇಕು. ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ವಿಮೆ ಹಾಗೂ ಪರಿಹಾರ ನೀಡುವ ಸಂದರ್ಭದಲ್ಲಿ ದಾಖಲೆಗಳು ಸರಿಯಾಗಿರುವಂತೆ ಪರಿಶೀಲನೆ ನಡೆಸುವಂತೆ ಸಚಿವ ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.



