ಬೆಂಗಳೂರು:- ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಇ-ಖಾತೆ ಪಡೆಯಲು ಯಾವುದೇ ಡೆಡ್ಲೈನ್ ಇಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಖಾತೆ ಇಲ್ಲದೆಯೇ ನಿವೇಶನಗಳು ಮಾರಾಟ ಆಗುತ್ತಿವೆ. ಇದು ಮಧ್ಯವರ್ತಿಗಳಿಗೆ ಹೇಳಿ ಮಾಡಿಕೊಟ್ಟ ಬೆಳವಣಿಗೆ. ಖಾತೆ ಇಲ್ಲದ ಸೈಟ್ಗಳಿಗೆ ಶಾಶ್ವತ ಪರಿಹಾರ ಕೊಡುತ್ತೇವೆ. ಇದಕ್ಕೆ ಯಾವುದೇ ಡೆಡ್ಲೈನ್ ಇಲ್ಲ. ಯಾರು ಸಹ ಆತುರ ಪಡಬೇಕಾದ ಅವಶ್ಯಕತೆ ಇಲ್ಲ ಎಂದರು.
ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಮಾಲೀಕರು ಇ-ಖಾತಾ ಪಡೆಯುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಜನರ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕೆಲವು ಅನುಕೂಲತೆಗಳನ್ನ ನಮ್ಮ ಗಮನಕ್ಕೆ ತಂದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಕೆಲ ಸರಳೀಕರಣ ಮಾಡಿದ್ದೇವೆ. ಎಆರ್ಒ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ಮಾಡುತ್ತಿದ್ದೇವೆ. ಇ-ಖಾತೆಗೆ ಸಹಾಯ ಮಾಡುವುದು ಇವರ ಜವಾಬ್ದಾರಿ. ಇದು ಬಿಬಿಎಂಪಿ ವ್ಯಾಪ್ತಿಯವರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
2-3 ದಿನಗಳೊಳಗೆ ಬೆಂಗಳೂರು ಒನ್ಗೆ ಅಪ್ಲೋಡ್ ಮಾಡಲಿದ್ದೇವೆ. ಖಾತಾ ನಿರ್ವಹಣೆ ಬಹಳ ತೊಂದರೆ ಆಗಿದೆ. ಇದಕ್ಕೆ ಇ-ಖಾತೆ ಒಂದೇ ಶಾಶ್ವತ ಪರಿಹಾರ. ಮನೆಯಿಂದಲೇ ಜನರು ಇ-ಖಾತೆ ಪಡೆಯಬಹುದು. ಇದು ಪ್ರಾರಂಭಿಕವಾಗಿ ಸಮಸ್ಯೆ ಆಗಬಹುದು. ಬಳಿಕ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳಿದ್ದಾರೆ.