ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಸುಮಾರು 3200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಮಾವು ಬೆಳೆಗಾರರು ಉತ್ತಮ ಲಾಭವನ್ನು ಪಡೆದಿದ್ದಾರೆ. ಆದರೆ ಕಳೆದ 3-4 ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ಮಾವು ಉತ್ಪಾದನೆ ಕುಸಿತವಾಗಿದ್ದು, ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಹಾಗೂ ಕೃಷಿ ವಿಶ್ವ ವಿದ್ಯಾಲಯ (ಜಿಕೆವಿಕೆ) ಬೆಂಗಳೂರಿನ ವಿಜ್ಞಾನಿಗಳು ಹಾಗೂ ಗದಗ ಜಿಲ್ಲೆಯ ಮಾವು ಬೆಳೆಗಾರರ ವಿಚಾರ-ವಿಮರ್ಶೆ ಸಭೆಯನ್ನು ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಧಾರವಾಡದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಮುಖ್ಯಸ್ಥ ಡಾ. ಲಕ್ಷ್ಮಣ ಕುಕನೂರ ರೈತರ ಸಮಸ್ಯೆಗಳನ್ನು ಆಲಿಸಿ, ರೈತರಿಗೆ ವೈಜ್ಞಾನಿಕವಾಗಿ ತೋಟದ ನಿರ್ವಹಣೆ ಮಾಡುವ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಳ್ಳಬೇಕೆಂದು ಹೇಳಿದರು. ಜಿಕೆವಿಕೆ ಬೆಂಗಳೂರಿನ ತಳಿ ಅಭಿವೃದ್ಧಿ ವಿಭಾಗದ ನಿವೃತ್ತ ತೋಟಗಾರಿಕಾ ಪ್ರಾಧ್ಯಾಪಕ ಡಾ. ಜಿ.ಕೆ. ಮುಕುಂದ ಆಪೂಸ್ ತಳಿಯೊಂದಿಗೆ ವಿವಿಧ ಮಾವಿನ ತಳಿಗಳಾದ ಕೇಸರ, ಮಲ್ಲಿಕಾ ಹಾಗೂ ರತ್ನ ತಳಿಗಳನ್ನು ಬೆಳೆಯುವದರಿಂದ ಉತ್ತಮ ಪರಾಗಸ್ಪರ್ಶಗೊಂಡು ಅಧಿಕ ಇಳುವರಿ ಪಡೆಯಬಹುದು ಎಂದು ಹೇಳಿದರು.
ಜೈವಿಕ ತಂತ್ರಜ್ಞಾನ ಮತ್ತು ಬೆಳೆ ಅಭಿವೃದ್ಧಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಅವಟಿ, ಹಣ್ಣು ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರವೀಣ ಜೋಳಗಿಕರ, ಕೀಟಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ. ಜೆ.ಬಿ. ಗೋಪಾಲಿ, ಸಸ್ಯ ರೋಗ ಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಡಾ. ರಮೇಶ ರೈತರಿಗೆ ಸೂಕ್ತ ಮಾಹಿತಿ ನೀಡಿದರು.
ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞರು, ಗದಗ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕ ಡಾ.ಶಶಿಕಾಂತ ಕೋಟಿಮನೆ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗದಗ ಜಿಲ್ಲೆಯ ಮಾವಿನ ಬೆಳೆಯ ಕಡಿಮೆ ಉತ್ಪಾದಕತೆಯ ಸಮಸ್ಯೆಗಳನ್ನು ವಿವರಿಸಿದರು. ಗದಗ ಜಿಲ್ಲೆಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ 56 ಜನ ಮಾವು ಬೆಳೆಗಾರರು ಭಾಗವಹಿಸಿ, ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.
ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಬಿ.ಎಲ್. ಮಂಜುನಾಥ ತಮ್ಮ ಸಂಸ್ಥೆಯಿಂದ ಬಿಡುಗಡೆಯಾದ ವಿವಿಧ ಮಾವಿನ ತಳಿಗಳು ಮತ್ತು ಮಾವಿನ ಬೆಳೆಯ ನಿರ್ವಹಣೆಯಲ್ಲಿ ಅನುಸರಿಸಬೇಕಾದ ವಿವಿಧ ತಂತ್ರಜ್ಞಾನಗಳ ಕುರಿತು ರೈತರಿಗೆ ವಿವರಿಸಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತç ವಿಭಾಗದ ಸಹಪ್ರಾಧ್ಯಾಪಕ ಡಾ. ಎಸ್.ಎಮ್. ಪ್ರಸನ್ನ ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆ ಹಾಗೂ ಮಾವಿನ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ವಿವರಿಸಿದರು.