ವಿಜಯಸಾಕ್ಷಿ ಸುದ್ದಿ, ಗದಗ: ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದಂತೆ ಮಕ್ಕಳ ಓದಿಗೆ ಅಡ್ಡಿಯಾಗುತ್ತಿರುವ ಮೊಬೈಲ್ ಮತ್ತು ಟಿವಿಗಳನ್ನು ನಿಯಂತ್ರಿಸಲು ಗದಗ ತಾಲೂಕು ಪಂಚಾಯಿತಿ ಕೈಗೊಂಡ ಕ್ರಮವೊಂದು ಈಗ ರಾಜ್ಯದ ಗಮನ ಸೆಳೆಯುತ್ತಿದೆ.
ಗದಗ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಜೆ 7ರಿಂದ ರಾತ್ರಿ 9ರವರೆಗೆ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಮತ್ತು ಟಿವಿಗಳನ್ನು ಸ್ವಿಚ್ ಆಫ್ ಮಾಡಬೇಕು. ಅಷ್ಟೇ ಅಲ್ಲದೆ, ಗ್ರಾಮದ ಬೀದಿಗಳಲ್ಲಿ ಟ್ರ‍್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಓಡಾಡುವುದನ್ನು ನಿಷೇಧಿಸಿ ಡಂಗುರ ಸಾರುವಂತೆ ಗದಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಕ್ರಾಂತಿಕಾರಿ ಸೂಚನೆಗೆ ನಾಂದಿ ಹಾಡಿದ್ದು ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಮತ್ತು ಮಕ್ಕಳ ಏಕಾಗ್ರತೆ ಹೆಚ್ಚಿಸಲು ಪೋಷಕರಲ್ಲಿ ಶಿಸ್ತು ಮೂಡಿಸುವುದು ಅನಿವಾರ್ಯ ಎಂಬ ದೂರದೃಷ್ಟಿಯೊಂದಿಗೆ ಅವರು ನೀಡಿದ ವಿನಂತಿ ಪತ್ರವನ್ನು ಆಧರಿಸಿ, ತಾ.ಪಂ ಇಒ ಈ ಸೂಚನೆ ನೀಡಿದ್ದಾರೆ. ಶಿಕ್ಷಣಾಧಿಕಾರಿಗಳ ಈ ಸಂವೇದನಾಶೀಲ ನಿರ್ಧಾರಕ್ಕೆ ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಹಳ್ಳಿಗಳಲ್ಲಿ ಮೊಬೈಲ್‌ನಿಂದ ವಿದ್ಯಾರ್ಥಿಗಳು ಕೆಲಕಾಲ ದೂರ ಉಳಿಯಲಿ ಎನ್ನುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ಮಹಾರಾಷ್ಟçದ ಸಾಂಗ್ಲಿ ಸಮೀಪದ ಮೋಹಿತೆ ವಡ್ಗಾಂವ್ ಗ್ರಾಮದಲ್ಲಿ ‘ಸೈರನ್’ ಪದ್ಧತಿ ಜಾರಿಗೆ ಬಂದಿತು. ಅದಾದ ನಂತರ ದಕ್ಷಿಣ ಕನ್ನಡ ಕೆಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಫೋನ್ ಬಿಡಿ ಓದಿಗೆ ಸಮಯ ಕೊಡಿ’ ಎಂಬ ಅಭಿಯಾನಗಳು ನಡೆದಿದ್ದವು. ಈಚೆಗಷ್ಟೆ ಬೆಳಗಾವಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಸ್ವಯಂಪ್ರೇರಿತವಾಗಿ ಜನರು ಸಂಜೆ ವೇಳೆ ಟಿವಿ ಬಂದ್ ಮಾಡಿ ಮಕ್ಕಳಿಗೆ ಓದಿಸಲು ಸಹಕರಿಸುತ್ತಿದ್ದಾರೆ. ಆದರೆ, ಸರ್ಕಾರಿ ಮಟ್ಟದಲ್ಲಿ ಅಧಿಕೃತವಾಗಿ ಡಂಗುರ ಸಾರಿಸಿ, ಮೊಬೈಲ್, ಟಿವಿಯಿಂದ ಎರಡು ಗಂಟೆ ದೂರ ಇರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವುದು ಗದಗ ಜಿಲ್ಲೆಯ ವಿಶೇಷತೆ.
ಗದಗ ತಾಲೂಕು ಪಂಚಾಯಿತಿ ಇಒ ಹೊರಡಿಸಿರುವ ಈ ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಗದಗ ಬಿಇಒ ಅವರ ಈ ಕಾರ್ಯ ಇತರ ಜಿಲ್ಲೆಗಳಿಗೂ ಮಾದರಿಯಾಗಲಿ ಎಂಬ ಒತ್ತಾಯ ಕೇಳಿಬರುತ್ತಿದೆ. ಒಂದು ವೇಳೆ ಈ ಪ್ರಯೋಗ ಗದಗದಲ್ಲಿ ಯಶಸ್ವಿಯಾದರೆ, ಮುಂಬರುವ ದಿನಗಳಲ್ಲಿ ಇಡೀ ರಾಜ್ಯಕ್ಕೆ ಇದು ಪಸರಿಸುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾ ಗದಗ ಗ್ರಾಮೀಣ ವಲಯದ ಶಿಕ್ಷಕರು.
“ಕೇವಲ ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡಿದರೆ ಸಾಲದು, ಮನೆಯಲ್ಲಿಯೂ ಪೂರಕ ವಾತಾವರಣ ಇರಬೇಕು. ಸಂಜೆಯ ಎರಡು ಗಂಟೆಗಳ ಕಾಲ ಡಿಜಿಟಲ್ ಉಪವಾಸ ಮಾಡುವುದರಿಂದ ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚುವುದರ ಜೊತೆಗೆ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧವೂ ಸುಧಾರಿಸಲಿದೆ ಎನ್ನುವ ಉದ್ದೇಶದಿಂದ ತಾ.ಪಂ ಇಒ ಅವರಿಗೆ ಮನವಿ ಮಾಡಿಕೊಂಡಿದೆ. ಮನವಿಗೆ ತಕ್ಷಣ ಸ್ಪಂದಿಸಿ, ಎಲ್ಲ ಪಿಡಿಒಗಳಿಗೆ ಸೂಚನೆ ನೀಡುವ ಮೂಲಕ ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ”
-
ವಿ.ವಿ. ನಡುವಿನಮನಿ.
ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿನಂತಿ ಮೇರೆಗೆ ಫೆ. 3ರಂದು ಎಲ್ಲ ಪಿಡಿಒಗಳಿಗೆ ಪತ್ರ ಬರೆಯಲಾಗಿದೆ. ಕಸ ವಿಲೇವಾರಿ ವಾಹನದ ಮೂಲಕ ಎರಡು ಗಂಟೆ ಮೊಬೈಲ್, ಟಿವಿಯಿಂದ ದೂರ ಉಳಿಯುವಂತೆ ಡಂಗುರ ಸಾರಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳುವ ಚಿಂತನೆ ಮೂಡಿದೆ.
-
ಮಲ್ಲಯ್ಯ ಕೊರವನವರ.
ತಾ.ಪಂ ಇಒ, ಗದಗ.



