ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಅರ್ಹ ಪಡಿತರ ಚೀಟಿದಾರರಿಗೆ ಈ ಹಿಂದೆ ಕುಟುಂಬದ ಸದಸ್ಯರಿಗೆ ಅನುಗುಣವಾಗಿ ಅಕ್ಕಿ ಬದಲಾಗಿ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಇದೀಗ ಫೆಬ್ರುವರಿ-2025ರಿಂದ ಅನ್ವಯವಾಗುವಂತೆ ಹಣದ ಬದಲಾಗಿ ಅಕ್ಕಿ ವಿತರಣೆಗೆ ಮುಂದಾಗಿದ್ದು, ಶಿರಹಟ್ಟಿ ತಾಲೂಕಿನಲ್ಲಿ 24,845 ಅರ್ಹ ಫಲಾನುಭವಿಗಳು ಇದರ ಸೌಲಭ್ಯ ಪಡೆಯಲಿದ್ದಾರೆ.
ಫೆಬ್ರವರಿ-25 ಮಾಹೆಯಲ್ಲಿ ವಿತರಿಸಬೇಕಾದ ಅಕ್ಕಿ ಪ್ರಮಾಣವನ್ನು ಸೇರಿ ಮಾರ್ಚ್-2025ರ ಮಾಹೆಯಲ್ಲಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಕನಿಷ್ಠ 4 ಜನ ಸದಸ್ಯರನ್ನು ಹೊಂದಿದ ಕುಟುಂಬಕ್ಕೆ ಹೆಚ್ಚುವರಿಯಾಗಿ ಫೆಬ್ರವರಿ-2025ರ 5 ಕೆಜಿ, ಮಾರ್ಚ್-2025ರ 5 ಕೆಜಿ, ಎನ್‌ಎಫ್‌ಎಸ್‌ಎ ಮಾರ್ಚ್-2025ರ 35 ಕೆಜಿ ಹೀಗೆ ಒಟ್ಟು 45 ಕೆಜಿ, ಗರಿಷ್ಠ 12 ಜನ ಸದಸ್ಯರಿಗೆ ಒಟ್ಟು 205 ಕೆಜಿ ಅಕ್ಕಿ ಸಿಗಲಿದೆ. ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯರಿಗೂ ಸಹ ಅನ್ನಭಾಗ್ಯದ ಫೆಬ್ರವರಿ-2025ರ 5 ಕೆಜಿ, ಮಾರ್ಚ್-2025ರ 5 ಕೆಜಿ, ಎನ್‌ಎಫ್‌ಎಸ್‌ಎಎ ಮಾರ್ಚ್-2025ರ 5 ಕೆಜಿ ಹೀಗೆ 15 ಕೆಜಿ ಅಕ್ಕಿ ಸಿಗಲಿದೆ.
ಶಿರಹಟ್ಟಿ ತಾಲೂಕಿನಲ್ಲಿ 36 ನ್ಯಾಯಬೆಲೆ ಅಂಗಡಿಗಳಲ್ಲಿ ತಾಲೂಕಿನಲ್ಲಿಯ ಅರ್ಹ ಪಡಿತರ ಚೀಟಿದಾರರಿಗೆ ಸರಕಾರ ಕೊಡಮಾಡಿರುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ನೀಡಬೇಕಿದ್ದ ಅಕ್ಕಿಯನ್ನು ಏಕಕಾಲದಲ್ಲಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಮಾಹೆಯ 1ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಪಡಿತರ ವಿತರಣೆ ನಡೆಯಲಿದೆ. ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡಿದ ತಕ್ಷಣವೇ ಪಡಿತರ ಪಡೆಯಲು ಸೂಚನೆ ನೀಡಿದ್ದಾರೆ. ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕವನ್ನು ನೀಡುವಂತಿಲ್ಲ. ಪಡಿತರ ವಿತರಣೆ ಕುರಿತು ದೂರುಗಳು ಇದ್ದಲ್ಲಿ ಸಹಾಯವಾಣಿ ಸಂಖ್ಯೆ: 1967ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ ಅನಿಲ ಬಡಿಗೇರ, ಈಗಾಗಲೇ ನ್ಯಾಯಬೆಲೆ ಅಂಗಡಿಕಾರರ ಸಭೆ ನಡೆಸಿ ಸಾರ್ವಜನಿಕರಿಗೆ ಸರಕಾರ ಕೊಡಮಾಡುವ ಹೆಚ್ಚುವರಿ ಅಕ್ಕಿಯನ್ನು ಸಮರ್ಪಕವಾಗಿ ವಿತರಣೆ ಮಾಡಲು ಸೂಚಿಸಿದೆ ಎಂದರು.
ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯ ಪ್ರಮಾಣದ ಮಾಹಿತಿಯನ್ನು ನಾಮಫಲಕಗಳಲ್ಲಿ ಅಳವಡಿಸಲಾಗಿದೆ. ತಾಲೂಕಿನಲ್ಲಿ ಈಗಾಗಲೇ ಶೇ.99ರಷ್ಟು ಇ-ಕೆವೈಸಿ ಆಗಿದ್ದು, ಎಲ್ಲ ಪಡಿತರ ಅಂಗಡಿಗಳಲ್ಲೂ ವಿತರಣೆ ಕಾರ್ಯ ಪ್ರಗತಿಯಲ್ಲಿದೆ.
– ಮಂಜುಳಾ ಆಕಳದ.
ಆಹಾರ ನಿರೀಕ್ಷಕಿ.