ದೊಡ್ಡಬಳ್ಳಾಪುರ: ಪ್ರೀತಿ ಮತ್ತು ಮದುವೆ ಎಂಬ ವೇಷದಲ್ಲಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಕಿರಾತಕ ಮಹಿಳೆಯೊಬ್ಬಳ ಅಸಲಿ ಮುಖ ದೊಡ್ಡಬಳ್ಳಾಪುರದಲ್ಲಿ ಬಯಲಾಗಿದೆ.
ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಮೊದಲ ಮತ್ತು ಎರಡನೇ ಪತಿಯರಿಂದ ತನಿಖೆಗಾಗಿ ದೂರು ನೀಡಲಾಗಿದೆ. ಸುಧಾರಾಣಿ, ಹಣವಿರುವ ಪುರಷರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ ಎಂದು ಸಂತ್ರಸ್ತರು ಹೇಳಿದ್ದಾರೆ. ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ.
ಮೊದಲ ಪತಿ ವೀರೆಗೌಡನೊಂದಿಗೆ ಇಬ್ಬರು ಮಕ್ಕಳು ಹುಟ್ಟಿದರೂ, “ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ” ಎಂಬ ಕ್ಷುಲ್ಲಕ ಕಾರಣವನ್ನು ಹೇಳಿ ಪತಿಯನ್ನೂ ಮಕ್ಕಳನ್ನೂ ತೊರೆದು ಹೋಗಿದ್ದಾಳೆ. ನಂತರ, ಡೆಲಿವರಿ ಬಾಯ್ ಅನಂತಮೂರ್ತಿಯನ್ನು ನಂಬಿಸಿ, ದೇವಸ್ಥಾನದಲ್ಲಿ ಮದುವೆಯಾಗಿದ್ದು, ಸುಮಾರು ಒಂದೂಕಾಲು ವರ್ಷಗಳ ಅವಧಿಯಲ್ಲಿ 15-20 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪಗಳಿವೆ.
ಅನಂತಮೂರ್ತಿಯಿಂದ ಹಣ ಪಡೆದ ನಂತರ, ಮತ್ತೊಂದು ಮದುವೆಯಾಗಿದ್ದಾಳೆ ಎಂಬ ಮಾಹಿತಿ ಬಂದಿದೆ. ಇದೀಗ ಮೊದಲ ಮತ್ತು ಎರಡನೇ ಪತಿ ಒಟ್ಟಿಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸಂತ್ರಸ್ತರು ಸುಧಾರಾಣಿ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.



