ಬೆಂಗಳೂರು: ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಪರ್ವೇಜ್, ಅಫ್ರಿಧಿ, ಸಮೀರ್, ಶಬ್ಬೀರ್, ಸಾಧೀಕ್ ಮತ್ತು ಮುನಾವರ್ ಸೇರಿದಂತೆ ಏಳು ಮಂದಿ ಬಂಧಿತರಾಗಿದ್ದಾರೆ. ಈ ಕುರಿತು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಕೇ ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ ಬಡಾ ಮಖಾನ್ ರಸ್ತೆಯಲ್ಲಿ ರಶೀದ್ ಪಾಷಾ (45) ಮೇಲೆ ಆರೋಪಿಗಳು ಬ್ಯಾಟ್ ಮತ್ತು ಬೊಂಬುಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಅಂಗಡಿಯಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಆರೋಪಿಗಳು ಜಿದ್ದಿನಿಂದ ಮತ್ತೆ ಬಂದು ರಾತ್ರಿ ಸುಮಾರು 8:30ರ ವೇಳೆಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ವೇಳೆ ರಶೀದ್ ಅವರ ಇಬ್ಬರು ಮಕ್ಕಳ ಮುಂದೆಯೇ ನಿರ್ದಯವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಹಿಂದೆ ಹಣಕಾಸು ವ್ಯವಹಾರ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಪರಿಸ್ಥಿತಿ ಉದ್ವಿಗ್ನವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಪಿ ಪಡೆ ನಿಯೋಜಿಸಲಾಗಿದೆ.



