ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಕೇಶ್ ನಿಧನದ ಸಂದರ್ಭದಲ್ಲಿ ಹತ್ತಿರದ ಊರಿನಲ್ಲೇ ಇದ್ದ ನಟ ರಿಷಬ್ ಶೆಟ್ಟಿ ರಾಕೇಶ್ ಅಂತಿಮ ದರ್ಶನಕ್ಕೆ ಹೋಗಿರಲಿಲ್ಲ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರಾಕೇಶ್ ಪೂಜಾರಿ ನಿಧನರಾದ 21 ದಿನಗಳ ಬಳಿಕ ರಿಷಬ್ ಶೆಟ್ಟಿ ಪತ್ನಿಯೊಂದಿಗೆ ರಾಕೇಶ್ ಪೂಜಾರಿ ಮನೆಗೆ ಭೇಟಿ ನೀಡಿದ್ದಾರೆ.
ರಾಕೇಶ್ ಪೂಜಾರಿ ನಿಧನಹೊಂದಿ 21 ದಿನಗಳ ಬಳಿಕ ರಿಷಬ್ ಶೆಟ್ಟಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ರಾಕೇಶ್ ತಂಗಿ ಮದುವೆಗೂ ಆರ್ಥಿಕ ಸಹಾಯ ಮಾಡಿದ್ದು, ಮುಂದಿನ ದಿನದಲ್ಲಿ ನಿರ್ಮಾಣವಾಗುವ ರಾಕೇಶ್‌ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಸದಾಕಾಲ ಕುಟುಂಬದೊಂದಿಗೆ ನಾನಿದ್ದೇನೆ ಎನ್ನುವ ಭರವಸೆಯನ್ನೂ ನೀಡಿದ್ದಾರೆ.
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿ ಘಳಿಸಿದ್ದ ರಾಕೇಶ್ ಪೂಜಾರಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲೂ ನಟಿಸಿದ್ದರು. ಹಲವು ದಿನಗಳ ಕಾಲ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಆದರೆ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಹೃದಯಾಘಾತದಿಂದ ನಿಧನರಾದರು.