ರಾಯಚೂರು: ‘ಕಾಂತಾರ’ ಬ್ಲಾಕ್‌ಬಸ್ಟರ್ ಮೂಲಕ ದೇಶಾದ್ಯಂತ ಡಿವೈನ್ ಸ್ಟಾರ್ ಎಂಬ ಹೆಸರನ್ನು ಪಡೆದಿರುವ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ.
ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂದು ಖ್ಯಾತಿ ಪಡೆದಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳೊಂದಿಗೆ ಆಗಮಿಸಿ ಆಶೀರ್ವಾದ ಪಡೆದುಕೊಂಡರು. ಮೊದಲು ಗ್ರಾಮದ ಆದಿದೇವತೆ ಶ್ರೀಮಾಂಚಲಮ್ಮ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದ ಅವರು, ನಂತರ ಶ್ರೀ ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಆ ಬಳಿಕ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು. ಈ ವೇಳೆ ಶ್ರೀಮಠದ ವತಿಯಿಂದ ರಿಷಬ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಿ, ರಾಘವೇಂದ್ರ ಸ್ವಾಮಿಗಳ ಸ್ಮರಣಿಕೆ ನೀಡಿ ಆಶೀರ್ವದಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್ ರಾವ್, ಪಿಆರ್‌ಒ ಐ.ಪಿ. ನರಸಿಂಹಾಚಾರ್ಯ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇನ್ನು, ಈ ತಿಂಗಳಾರಂಭದಲ್ಲಿ ಮಂಗಳೂರಿನ ಕಾರ್ಣಿಕ ಪ್ರಸಿದ್ಧ ಬಾರಬೈಲ್ನ ಜಾರಂದಾಯ ಮತ್ತು ವರಾಹ ಪಂಜುರ್ಲಿ ಕ್ಷೇತ್ರದಲ್ಲಿ ನಡೆದ ನೇಮೋತ್ಸವದಲ್ಲಿ ಹೊಂಬಾಳೆ ಫಿಲ್ಮ್ಸ್ ತಂಡ ಹರಕೆಯ ಸೇವೆ ಸಲ್ಲಿಸಿತ್ತು. ಈ ನೇಮೋತ್ಸವದಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ, ಇಬ್ಬರು ಮಕ್ಕಳು, ನಟರಾದ ಗೌತಮ್ ಶನೀಲ್, ಸ್ವರಾಜ್ ಶೆಟ್ಟಿ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
‘ಕಾಂತಾರ: ಚಾಪ್ಟರ್ 1’ ಚಿತ್ರ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಈ ಹರಕೆಯನ್ನು ಸಲ್ಲಿಸಿತ್ತು. ಈ ಹಿಂದೆ ‘ಕಾಂತಾರ’ ಚಿತ್ರದ ಸಮಯದಲ್ಲೂ ರಿಷಬ್ ಶೆಟ್ಟಿ ಅವರು ಪಚ್ಚನಾಡಿ ಸಮೀಪದ ಅಣ್ಣಪ್ಪ ಪಂಜುರ್ಲಿ ಕ್ಷೇತ್ರದಲ್ಲಿ ಹರಕೆ ಸೇವೆ ಸಲ್ಲಿಸಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಬಾರಬೈಲ್ನಲ್ಲಿ ನಡೆದ ನೇಮೋತ್ಸವದಲ್ಲೂ ರಿಷಬ್ ಶೆಟ್ಟಿ ಭಾಗಿಯಾಗಿದ್ದರು.
ಅಕ್ಟೋಬರ್ 2 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ‘ಕಾಂತಾರ: ಚಾಪ್ಟರ್ 1’ ನಿರೀಕ್ಷೆಯಂತೆ ಭರ್ಜರಿ ಯಶಸ್ಸು ದಾಖಲಿಸಿತ್ತು. ಚಿತ್ರದಲ್ಲಿನ ಅಭಿನಯ, ನಿರ್ದೇಶನ ಹಾಗೂ ಕಥನ ಶೈಲಿಗೆ ರಿಷಬ್ ಶೆಟ್ಟಿ ಅಪಾರ ಪ್ರಶಂಸೆ ಪಡೆದಿದ್ದಾರೆ. ಜೊತೆಗೆ 2025ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅವರು 10ನೇ ಸ್ಥಾನ ಪಡೆದಿದ್ದಾರೆ. ಸತತ ಸಾಧನೆಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಮ್ಮೆ ತರುತ್ತಿರುವ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.



