ನಗರಸಭೆ ಬಿಜೆಪಿ ಸದಸ್ಯರಿಂದ ರಸ್ತೆ ತಡೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸದ ಉಪವಿಭಾಗಾಧಿಕಾರಿಗಳ ವಿರುದ್ಧ ನಗರಸಭೆ ಬಿಜೆಪಿ ಸದಸ್ಯರು ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಚುನಾವಣೆ ಅಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿಗಳು ಒಂದು ರಾಜಕೀಯ ಪಕ್ಷಕ್ಕೆ ಅಂಟಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನಗರಸಭೆ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ರಸ್ತೆ ತಡೆಗೂ ಮುನ್ನ ಬಿಜೆಪಿ ಸದಸ್ಯರು ಎಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಲ್ಲದೆ ವಿಡಿಯೋ ಚಿತ್ರೀಕರಣಕ್ಕೆ ಮುಂದಾದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಎಸಿ ಕಚೇರಿ ಮುಂಭಾಗದಿಂದ ರಸ್ತೆಗೆ ಬಂದು ಧರಣಿ ಕುಳಿತರು. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. 20 ನಿಮಿಷಕ್ಕೂ ಹೆಚ್ಚು ಕಾಲ ಬಿಜೆಪಿ ಸದಸ್ಯರು ರಸ್ತೆ ತಡೆ ನಡೆಸಿದರು. ಪೊಲೀಸರು ಮತ್ತೆ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಎಸಿ ಕಚೇರಿ ಎದುರು ಧರಣಿ ಕುಳಿತರು.

ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮೀ ದಿಂಡೂರ, ಚಂದ್ರು ತಡಸದ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಮುತ್ತು ಮುಶಿಗೇರಿ, ಪ್ರಕಾಶ ಅಂಗಡಿ, ಮಾಹಾಂತೇಶ ನಲವಡಿ, ಬಿಜೆಪಿ ಮುಖಂಡರಾದ ಮಹೇಶ ದಾಸರ, ಶಿವರಾಜಗೌಡ ಹಿರೇಮನಿಪಾಟೀಲ ಇತರರು ಉಪಸ್ಥಿತರಿದ್ದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಪ್ರತಿಭಟನಾಕಾರರ ಮನವೊಲಿಸರು ಯತ್ನಿಸಿದರು. ಆದರೆ ಪಟ್ಟು ಸಡಿಲಿಸದ ಬಿಜೆಪಿ ಸದಸ್ಯರು ದಿನಾಂಕ ಘೋಷಣೆ ಆದ ನಂತರವೇ ಪ್ರತಿಭಟನೆ ಕೈ ಬಿಡುತ್ತೆವೆ ಎಂದರು. ಚುನಾವಣೆ ದಿನಾಂಕ ನಡೆಸುವ ನಿರ್ಧಾರ ಕೈಗೊಳ್ಳುವ ಅಧಿಕಾರಿ ಎಸಿ ಅವರಿಗೆ ಮಾತ್ರವಿದೆ ಎಂದಾಗ, ಆವೇಶಕ್ಕೊಳಗಾದ ಬಿಜೆಪಿ ಸದಸ್ಯರು, ಹಿರಿಯ ಅಧಿಕಾರಿಗಳಾಗಿ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲು ಆಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.


Spread the love

LEAVE A REPLY

Please enter your comment!
Please enter your name here