ಆನೇಕಲ್:- ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ದಿಢೀರ್ ಕುಸಿದುಬಿದ್ದಿದ್ದು, ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.
ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಹಳೇ ಚಂದಾಪುರದ ಬಳಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದ್ದು, ಚಂದಾಪುರದಿಂದ ಕರ್ನಾಟಕದ ಗಡಿ ಅತ್ತಿಬೆಲೆವರೆಗೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ರೋಗಿಗಳು, ಶಾಲಾ ಮಕ್ಕಳು ಸಕಾಲಕ್ಕೆ ತಲುಪಲು ಪರದಾಡಿದರು.
ಸ್ಥಳದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಡರ್ ಪಾಸ್ ಕಾಮಗಾರಿ ವೇಳೆ ಸಮೀಪದ ಲೇಔಟ್‌ಗಳಿಂದ ಹರಿದ ಸ್ಯಾನಿಟರಿ ನೀರು ರಸ್ತೆಯ ಅಡಿಭಾಗಕ್ಕೆ ನುಗ್ಗಿದ್ದು, ಮಣ್ಣು ಸಡಿಲಗೊಂಡು ಭಾರಿ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕಾರಣದಿಂದ ವಾಹನ ಸವಾರರು ಹೈರಾಣಾಗಿದ್ದು, ರೋಗಿಗಳು, ಶಾಲಾ ಮಕ್ಕಳು ಮತ್ತು ದಿನನಿತ್ಯ ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಕ್ಕೆ ತಲುಪಲು ತೊಂದರೆ ಅನುಭವಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ತುರ್ತು ಪರಿಶೀಲನೆ ನಡೆಸಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಟ್ಟ ದೃಶ್ಯವೂ ಕಂಡುಬಂದಿದೆ.



