ಬೆಂಗಳೂರು: ಹೊಸ ವರ್ಷಾಚರಣೆಗೆ ಹೊರಗಿದ್ದ ಮನೆಮಾಲೀಕರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ದುಬಾರಿ ವಾಚ್ಗಳನ್ನು ಕಳ್ಳತನ ಮಾಡಿದ್ದ ಮನೆಗೆಲಸದ ಮಹಿಳೆ ಮತ್ತು ಆಕೆಯ ಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಹಾಜಿರಾ ಬೇಗಂ ಮತ್ತು ಆಕೆಯ ಪತಿ ಶಾಹಿರ್ ಬಂಧಿತ ಆರೋಪಿಗಳು. ಇವರಿಂದ 787 ಗ್ರಾಂ ಚಿನ್ನಾಭರಣ, 291 ಗ್ರಾಂ ಬೆಳ್ಳಿಯ ವಸ್ತುಗಳು, 7 ದುಬಾರಿ ವಾಚ್ಗಳು ಸೇರಿದಂತೆ ಒಟ್ಟು ₹1.37 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸಿ ಅಭಿಷೇಕ್ ಅವರ ಮನೆಯಲ್ಲಿ ಹಾಜಿರಾ ಬೇಗಂ ಹಲವು ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದರು. ಮದುವೆಯ ಕಾರಣ ನೀಡಿ ಸುಮಾರು ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಹೊಸ ವರ್ಷ ಸಮೀಪಿಸುತ್ತಿದ್ದ ವೇಳೆ ಮತ್ತೆ ಕೆಲಸಕ್ಕೆ ಸೇರಲು ಇಂಗಿತ ವ್ಯಕ್ತಪಡಿಸಿದ್ದಳು. ಹಳೆಯ ಪರಿಚಯದ ಹಿನ್ನೆಲೆಯಲ್ಲಿ ಮನೆಮಾಲೀಕರು ಆಕೆಯನ್ನು ನಂಬಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದರು.
ಡಿಸೆಂಬರ್ 30ರಂದು ಅಭಿಷೇಕ್ ಅವರು ಕುಟುಂಬದೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಗೆ ತಮಿಳುನಾಡಿಗೆ ತೆರಳಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಹಾಜಿರಾ, ತನ್ನ ಪತಿ ಶಾಹಿರ್ನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮನೆಯ ಕೀಲಿಗಳನ್ನು ಬಳಸಿಕೊಂಡು ಇಬ್ಬರೂ ಸೇರಿ ₹1.37 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಡಿಸೆಂಬರ್ 31ರಂದು ಮನೆಗೆ ಮರಳಿದ ಅಭಿಷೇಕ್ ಅವರಿಗೆ ಕಳ್ಳತನ ನಡೆದಿರುವುದು ತಿಳಿದುಬಂದಿದ್ದು, ತಕ್ಷಣವೇ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಹಾಜಿರಾ ಬೇಗಂ ಹಾಗೂ ಆಕೆಯ ಪತಿ ಶಾಹಿರ್ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸಂಪೂರ್ಣವಾಗಿ ಕಳ್ಳತನವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



