ಮೈಸೂರು:- ದರೋಡೆ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿರುವ ಘಟನೆ ಇಲ್ಲಿನ ಗೋಪಾಲಪುರ ಗ್ರಾಮದಲ್ಲಿ ಜರುಗಿದೆ.
ಗುಂಡೇಟು ತಿಂದ ಆರೋಪಿಯನ್ನು ಆದರ್ಶ್ ಎಂದು ಗುರುತಿಸಲಾಗಿದ್ದು, ಈತ ಕೇರಳ ಮೂಲದವ ಎನ್ನಲಾಗಿದೆ. ಸ್ಥಳ ಮಹಜರು ಸಮಯದಲ್ಲಿ ಬಿಯರ್ ಬಾಟಲಿಯಿಂದ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆದರ್ಶ್ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮೈಸೂರು-ಮಾನಂದವಾಡಿ ಹೆದ್ದಾರಿಯಲ್ಲಿ ಮುಸುಕುಧಾರಿಗಳ ತಂಡವೊಂದು ಗುಜ್ಜೇಗೌಡನ ಪುರ ಗ್ರಾಮದಲ್ಲಿ ಕೇರಳ ಉದ್ಯಮಿಯೊಬ್ಬರ ಕಾರು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿತ್ತು. ಆರೋಪಿಗಳು ಗೋಪಾಲಪುರ ಗ್ರಾಮದಲ್ಲಿ ಒಂದು ಕಾರನ್ನು ಬಿಟ್ಟು ಪರಾರಿಯಾಗಿದ್ದರು.
ಪ್ರಕರಣದ ಆರೋಪಿ ಆದರ್ಶ್‌ನನ್ನು ಸ್ಥಳ ಮಹಜರಿಗಾಗಿ ಶುಕ್ರವಾರ ರಾತ್ರಿ 9ಕ್ಕೆ ಗೋಪಾಲಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಆರೋಪಿಯು ಜಯಪುರ ಠಾಣಾ ಪಿ.ಎಸ್.ಐ ಪ್ರಕಾಶ್ ಯತ್ತಿಮನಿ ಮತ್ತು ಪೊಲೀಸ್ ಸಿಬ್ಬಂದಿ ಹರೀಶ್ ಅವರಿಗೆ ಬಾಟಲಿಯಿಂದ ಚುಚ್ಚಿ, ಪರಾರಿಯಾಗಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ತಂಡದಲ್ಲಿದ್ದ ಬೈಲಕುಪ್ಪೆ ಠಾಣೆ ಪಿಎಸ್ಐ ಎಂ.ಕೆ.ದೀಪಕ್ ಫೈಯರಿಂಗ್ ನಡೆಸಿದ್ದಾರೆ. ಇಬ್ಬರು ಪೊಲೀಸರಿಗೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡೇಟು ಬಿದ್ದ ಆರೋಪಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.