HomeGadag Newsಜಲಧಾರೆಯ ರಮ್ಯ ಸೊಬಗು : ಹಚ್ಚ ಹಸುರಿನ ರಮಣೀಯ ದೃಶ್ಯ

ಜಲಧಾರೆಯ ರಮ್ಯ ಸೊಬಗು : ಹಚ್ಚ ಹಸುರಿನ ರಮಣೀಯ ದೃಶ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮಳೆಗಾಲದ ವರ್ಷ ವೈಭವಕ್ಕೊಂದು ಗರಿ ಎಂಬಂತೆ ಪಟ್ಟಣದ ಗುಡ್ಡ ಸೇರಿದಂತೆ ಸುತ್ತಲಿನ ಗ್ರಾಮಗಳ ಬೆಟ್ಟಗಳಲ್ಲಿ ಸೃಷ್ಟಿಯಾಗಿರುವ ಅನೇಕ ಕಿರು ಜಲಪಾತಗಳು ಕಂಗೊಳಿಸುತ್ತ ಜನರನ್ನು ಚಿತ್ತಾಕರ್ಷಿಸುತ್ತಿವೆ.

ತಾಲೂಕಿನಲ್ಲಿ ರೋಹಿಣಿ ಮಳೆಯಿಂದಾಗಿ ಬೆಟ್ಟ-ಗುಡ್ಡಗಳಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗಿ ಮೈದುಂಬಿ ಹರಿಯುತ್ತಿವೆ. ಗಜೇಂದ್ರಗಡ ತಾಲೂಕಿನ ದಕ್ಷಿಣ ಕಾಶಿ ಕಾಲಕಾಲೇಶ್ವರ ಬೆಟ್ಟದಲ್ಲಿ ಅಂತರ ಗಂಗೆ ಹಾಗೂ ಸುತ್ತಲಿನ ಬೆಟ್ಟದಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗಿ ಪರಿಸರ ಸೌಂದರ್ಯ ಹೆಚ್ಚಿಸುತ್ತಿದ್ದು, ಸೃಷ್ಟಿಕರ್ತನೂ ಒಮ್ಮೆ ಬೆರಗಾಗುವಂತಹ ಅನುಭವ. ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸುರಿನ ರಮಣೀಯ ದೃಶ್ಯ.

ಊಹೆಗೂ ನಿಲುಕದ ಚಿತ್ತಾರ, ಗುಡ್ಡದ ಸಾಲಿನಿಂದ ಮೈ ತುಂಬಿ ಹರಿಯುವ, ವಯ್ಯಾರದಿಂದ ಧರೆಗೆ ಹಾಲಿನ ಕಡಲಿನಂತೆ ಧುಮುಕುತ್ತಿರುವ ಕಿರು ಜಲಪಾತಗಳು ನೋಡುವ ಕಣ್ಣಿಗೆ ರಸದೌತಣ ನೀಡುತ್ತಿವೆ.

ವಿಶಾಲ ಹೃದಯದ ಪ್ರತೀಕದಂತಿರುವ ಇಲ್ಲಿನ ಬೆಟ್ಟದ ಮೇಲೆ ಹಾಗೂ ಕಣವಿ ವೀರಭದ್ರೇಶ್ವರ ಮಂದಿರದ ಎದುರಿನ ರಸ್ತೆ, ಎಡಗಡೆ ಗುಡ್ಡದ ಅಂಚಿನಿಂದ ನೈಜ ಸೌಂದರ್ಯವನ್ನು ಸವಿಯುತ್ತ ಒಂದು ಕೀ.ಮೀ.ವರೆಗೂ `ನನ್ನನ್ನು ನೊಡಲು ಬನ್ನಿ’ ಎಂದು ಕೈ ಬೀಸಿ ಕರೆಯುತ್ತಿರುವಂತಿದೆ. ಅಸಂಖ್ಯಾತ ಭಕ್ತರ ಆರಾಧ್ಯದೈವ ದಕ್ಷಿಣಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ದೇವಸ್ಥಾನದ ಅಂತರಗಂಗೆ ಇಡೀ ನಾಡಿಗೆ ಚಿರಪರಿಚಿತ. ಆದರೆ ಅದಕ್ಕೆ ಹೊಂದಿರುವ ಬೆಟ್ಟಗಳಲ್ಲಿ ಮಳೆಯಾದಾಗ ತಾತ್ಕಾಲಿಕಾಗಿ ಉದ್ಭವವಾಗುವ ಸಣ್ಣ-ಸಣ್ಣ ಜಲಪಾತಗಳು ಹೆಚ್ಚಿನ ಪ್ರಚಾರ ದೊರೆಯದೆ ನಾಡಿಗೆ ಅಪರಿಚಿತವಾಗಿಯೇ ಉಳಿದುಕೊಂಡಿವೆ. ಗುಡ್ಡದ ಅಂಚಿನಿಂದ, ಪ್ರಕೃತಿ ಮಾತೆಯ ಬೆಟ್ಟದ ಕಲ್ಲು ಬಂಡೆಗಳ ಮಧ್ಯದಲ್ಲಿ ಅಬ್ಬರದೊಂದಿಗೆ ನುಸುಳುವ ಜಲ ಧಾರೆಯು, ವೈಯ್ಯಾರದಿಂದ ಧುಮುಕುವ ತಿಳಿ ಹಸಿರು-ನೀಲಿ ಬಣ್ಣದ ಜಲ ವೈಭವದ ನಯನಮನೋಹರ ಸೊಬಗನ್ನು ಪರಿಸರ ಪ್ರಿಯರು ಆಸ್ವಾದಿಸುತ್ತಿದ್ದಾರೆ.

ಬೆಟ್ಟಗಳ ನೂರಾರು ಅಡಿ ಎತ್ತರದಿಂದ ಹಾಲಿನ ಧಾರೆ ಚೆಲ್ಲಿದಂತೆ ಗೋಚರಿಸುವ ಈ ಜಲಸಿರಿಯ ವೈಭವ ಕಂಡ ಜನತೆ ಅಲ್ಲಿಯೇ ಮೈಮರೆತು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಇದರ ದರ್ಶನವು ಕಂಗಳಿಗೆ ಹೊಸ ಹಬ್ಬವಾದರೆ, ಜಲಪಾತದ ಸಪ್ಪಳದೊಂದಿಗೆ ಪಕ್ಷಿಗಳ ಕಲರವ ಕರ್ಣಾನಂದವಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗುಡ್ಡಗಳ ಮೇಲೆ ಜಲ ವೈಭವ ಪ್ರಾರಂಭವಾಗಿದೆ. ಇದನ್ನು ನೋಡಲು ಜನರು ತಂಡೋಪತಂಡವಾಗಿ ಕಾಲಕಾಲೇಶ್ವರದತ್ತ ಹೆಜ್ಜೆ ಹಾಕುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!