ಹಿಟ್ ಮ್ಯಾನ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಪ್ರಸ್ತುತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಳೆದ ಕೆಲವು ಪಂದ್ಯಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಮುಗಿದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ ಇನ್ನು ಮುಂದೆ ಏಕದಿನ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಎಸ್, ರೋಹಿತ್ ಕಳೆದ ಐದು ವರ್ಷಗಳಿಂದ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಐಪಿಎಲ್ ನಂತರ ಅವರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ 2027 ರ ವಿಶ್ವಕಪ್ಗಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಇದು ಸರಿಯಾದ ಸಮಯ ಎಂಬುದು ರೋಹಿತ್ ಅಭಿಪ್ರಾಯವಾಗಿದೆ. ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದ ಕಾರಣ ಮತ್ತು ದೊಡ್ಡ ಪಂದ್ಯಾವಳಿಗಳ ಕಾರಣದಿಂದಾಗಿ ಈ ಶಸ್ತ್ರಚಿಕಿತ್ಸೆಯನ್ನು ಬಹಳ ಸಮಯದಿಂದ ಮುಂದೂಡುತ್ತಿದ್ದಾರೆ. ಆದರೆ ಈಗ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದು, ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯವಿದೆ.
ರೋಹಿತ್ ಶರ್ಮಾ ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡುತ್ತಿಲ್ಲ. ಮುಂದಿನ 3 ತಿಂಗಳು ಯಾವುದೇ ಏಕದಿನ ಸರಣಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರೋಹಿತ್‌ಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿದೆ. ರೋಹಿತ್ ಶರ್ಮಾ 2016 ರಲ್ಲಿ ಕ್ವಾಡ್ ಸ್ನಾಯುರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ 3 ತಿಂಗಳು ಬೇಕಾಯಿತು. ಇದೀಗ ಮಂಡಿರಜ್ಜು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಚೇತರಿಸಿಕೊಳ್ಳಲು ಅವರಿಗೆ ಸುಮಾರು 3-4 ತಿಂಗಳುಗಳು ಬೇಕಾಗಬಹುದು.