ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮಾಜದಲ್ಲಿನ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಕಾರ್ಯವನ್ನು ಮಾಡಿದಲ್ಲಿ ದೇಶಕ್ಕೆ ಸತ್ಪ್ರಜೆಗಳನ್ನು ನೀಡಿದಂತಾಗುತ್ತದೆ. ಮಕ್ಕಳನ್ನು ಸಮಾಜಮುಖಿ ವ್ಯಕ್ತಿಯಾಗಿ ರೂಪಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಅವರು ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರಾಗಿ ನೇಮಕಗೊಂಡಿರುವ ವಕೀಲ ಪಿ.ಎಂ. ವಾಲಿ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಸದಸ್ಯರಾಗಿ ನೇಮಕಗೊಂಡಿರುವ ವಕೀಲ ಬಿ.ಎನ್. ಸಂಶಿ ಅವರಿಗೆ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ ವತಿಯಿಂದ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಕಲ್ಯಾಣ ಸಮಿತಿ ಬಿ.ಎನ್. ಸಂಶಿ ಮಾತನಾಡಿ, ಬಾಲಾಪರಾಧಿ ಮಕ್ಕಳಿಗೆ ಅಪರಾಧಿಗಳು ಎನ್ನದೆ ಅವರನ್ನು ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ಎಂದು ಕರೆಯಲಾಗುತ್ತದೆ. ಮಕ್ಕಳನ್ನು ವಿಚಾರಣೆ ನಡೆಸುವ ಪೊಲೀರಿಗೆ ಯುನಿಫಾರ್ಮ್ ಇರುವುದಿಲ್ಲ. ಅವರು ಮಕ್ಕಳ ಸ್ನೇಹಿತರಾಗಿ ಕೆಲಸ ಮಾಡುತ್ತಾರೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಗುವಿಗೆ ಆಪ್ತ ಸಮಾಲೋಚನೆ ಅಗತ್ಯವಾಗಿರುತ್ತದೆ. ಆ ಕೆಲಸವನ್ನು ಮಕ್ಕಳ ಕಲ್ಯಾಣ ಸಮಿತಿ ಮಾಡುತ್ತಿದೆ. ಬಾಲಕಿಯರಿಗಾಗಿ ಬಾಲಕಿಯರ ಮಂದಿರ ಮತ್ತು ಬಾಲಕರಿಗಾಗಿ ಬಾಲಕರ ಮಂದಿರದಲ್ಲಿ ಪರಿತ್ಯಕ್ತ ಮಕ್ಕಳ ಪಾಲನೆ, ಪೋಷಣೆ ನಡೆಯುತ್ತದೆ. ತಕ್ಕ ವಯೋಮಾನದವರೆಗೆ ಅವರನ್ನು ಪೋಷಣೆ ಮಾಡಿ ಮತ್ತೆ ಸಮಾಜಕ್ಕೆ ಸಮರ್ಪಿಸುವುದು ಸಮಿತಿಯ ಕೆಲಸವಾಗಿದೆ ಎಂದರು.
ಸಾಹಿತಿಗಳಾದ ಸಿ.ಜಿ. ಹಿರೇಮಠ, ಪೂರ್ಣಾಜಿ ಖರಾಟೆ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮುಂತಾದವರಿದ್ದರು. ಮಾಲಾದೇವಿ ದಂಧರಗಿ ಸ್ವಾಗತಿಸಿದರು. ರೇಖಾ ವಡಕಣ್ಣವರ ನಿರೂಪಿಸಿದರು. ಸೋಮಣ್ಣ ಯತ್ತಿನಹಳ್ಳಿ ವಂದಿಸಿದರು.
ಬಾಲ ನ್ಯಾಯ ಮಂಡಳಿ ಸದಸ್ಯ ಪಿ.ಎಂ. ವಾಲಿ ಮಾತನಾಡಿ, ಗಂಡು ಮಕ್ಕಳೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿ ಆಗುವುದು ಹೆಚ್ಚು. ಇದಕ್ಕೆ ಪಾಲಕರ ನಿರ್ಲಕ್ಷ್ಯವೇ ಕಾರಣ. ಹೆಣ್ಣು ಮಗುವಿನ ಮೇಲಿನ ಕಾಳಜಿ ಗಂಡು ಮಕ್ಕಳ ಮೇಲಿದ್ದರೆ ಅವರಲ್ಲಿ ಅಪರಾಧಿ ಭಾವನೆ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ತಾಯಿಯಾದವಳು ತನ್ನ ಗಂಡು ಮಕ್ಕಳನ್ನು ಅತೀ ಜವಾಬ್ದಾರಿಯಿಂದ ಬೆಳೆಸಬೇಕು ಎಂದರು.