ವಿಜಯಸಾಕ್ಷಿ ಸುದ್ದಿ,ಲಕ್ಮೇಶ್ವರ: ಧಾರವಾಡದಲ್ಲಿ ಜ.6-10ರವರೆಗೆ ಸಸ್ಯ ಚೇತನ ಜಿಲ್ಲಾ ಸ್ಕೌಟ್ಸ್, ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆದಯಲಿರುವ ಜಾಂಬೋರೇಟ್‌ಗೆ ಲಕ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳಿಂದ ರೊಟ್ಟಿ ಮತ್ತು ಶೇಂಗಾ ಚಟ್ನಿಯನ್ನು ಗುರುವಾರ ಪಟ್ಟಣದ ಸರಕಾರಿ ಹಿರಿಯ ಮಾದರಿ ಹೆಣ್ಣು ಮಕ್ಕಳ ಶಾಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಯಕ್ ಅವರ ಸಮ್ಮುಖದಲ್ಲಿ ರವಾನೆ ಮಾಡಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಮತ್ತು ಧಾರವಾಡ ಜಿಲ್ಲಾ ಸಂಸ್ಥೆಯ ಸಹಯೋಗದೊಂದಿಗೆ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಾರವಾರ, ಶಿರಸಿ, ವಿಜಯಪುರ ಈ ಎಂಟು ಜಿಲ್ಲೆಗಳ ಸ್ಕೌಟ್ಸ್-ಗೈಡ್ಸ್ಗಳಿಗೆ ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್-2025 ಜ.6ರಿಂದ 10ರವರೆಗೆ ಸಸ್ಯ ಚೇತನ ಜಿಲ್ಲಾ ಸ್ಕೌಟ್ ಗೈಡ್ ತರಬೇತಿ ಕೇಂದ್ರ, ದಡ್ಡಿಕಮಲಾಪುರ ಧಾರವಾಡ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಶಿರಹಟ್ಟಿ ಹಾಗೂ ಲಕ್ಮೇಶ್ವರ ತಾಲೂಕಿನಿಂದ 5000 ರೊಟ್ಟಿ ಮತ್ತು ಶೇಂಗಾ ಚಟ್ನಿಯನ್ನು ಶಿಕ್ಷಣ ಇಲಾಖೆ ವತಿಯಿಂದ ವಿವಿಧ ಶಾಲೆಗಳಿಂದ ಸಂಗ್ರಹಿಸಿ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಮಾತನಾಡಿ, ಬೆಳಗಾವಿ ವಿಭಾಗದ ಈ ಜಾಂಬೋರೇಟ್‌ಗೆ ಎಂಟು ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಲಿದ್ದು, ನಮ್ಮ ಭಾಗದಿಂದ ಶಿಕ್ಷಣ ಇಲಾಖೆ ವತಿಯಿಂದ ಶಿರಹಟ್ಟಿ ಮತ್ತು ಲಕ್ಮೇಶ್ವರ ತಾಲೂಕುಗಳ ಶಾಲೆಗಳಿಂದ ಸಂಗ್ರಹಿಸಿ ಕಳುಹಿಸಲಾಗಿದೆ. ಅಲ್ಲಿನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರಲಾಪುರ, ಬಿಆರ್‌ಪಿ ಈಶ್ವರ ಮೆಡ್ಲೇರಿ, ಸಿಆರ್‌ಪಿ ಗಳಾದ ಸತೀಶ ಬೋಮಲೆ, ಉಮೇಶ ನೇಕಾರ, ಲೋಕೇಶ ಮಠದ, ಮುಖ್ಯ ಶಿಕ್ಷಕ ಬಸವರಾಜ ಕುಂಬಾರ, ಶಿಕ್ಷಕರಾದ ಎನ್.ಎಸ್. ಬಂಕಾಪುರ, ಆರ್.ಎಮ್. ಶಿರಹಟ್ಟಿ, ಎಚ್.ಡಿ. ನಿಂಗರೆಡ್ಡಿ, ಎಲ್.ಎ. ಬಣಕಾರ, ಆರ್.ಕೆ. ಉಪನಾಳ, ಹಾಲನಗೌಡ ಪಾಟೀಲ ಹಾಜರಿದ್ದರು.