ಬಳ್ಳಾರಿ:- ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಸರ್ಕಾರದ ಬೇಜವಾಬ್ದಾರಿ ತನವೋ ಬಳ್ಳಾರಿಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಖರೀದಿಸಿದ ಕ್ವಿಂಟಾಲ್ ಗಟ್ಟಲೆ ಜೋಳ ಗೋದಾಮಿನಲ್ಲಿ ಕೊಳೆಯುತ್ತಿದೆ.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಸಾವಿರಾರು ಕ್ವಿಂಟಲ್ ಜೋಳವನ್ನು ಖರೀದಿಸಿ, ಗೊದಾಮಿನಲ್ಲಿ ಸರ್ಕಾರ ದಾಸ್ತಾನು ಮಾಡುತ್ತಿದೆ. ಆದರೆ, ದಾಸ್ತಾನು ಮಾಡಿದ ಜೋಳವನ್ನು ಒಂದು ವರ್ಷವಾದರೂ ವಿತರಿಸಿಲ್ಲ. ಇದರಿಂದ ಜೋಳ ಗೋದಾಮಿನಲ್ಲೇ ಕೊಳೆಯುತ್ತಿದೆ.
ಹೌದು, ಬಳ್ಳಾರಿಯಲ್ಲಿರುವ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ರಾಜ್ಯ ಸರ್ಕಾರ ಬಡವರಿಗೆ ನೀಡಲೆಂದು ಸಂಗ್ರಹಿಸಿದ ಸುಮಾರು 40 ಕ್ವಿಂಟಲ್ ಜೋಳ ಸಂಗ್ರಹಿಸಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜೋಳವನ್ನು ಸಂಗ್ರಹಿಸಿ ಒಂದು ವರ್ಷ ಕಳೆದಿದೆ. ಆದರೆ ಇನ್ನೂವರೆಗೂ ಬಡ ಜನರಿಗೆ ವಿತರಣೆಯಾಗಿಲ್ಲ. ಖರೀದಿ ಮಾಡಿದ 3-4 ತಿಂಗಳಲ್ಲಿ ಜೋಳ ವಿತರಣೆ ಮಾಡಿದ್ದರೇ, ಹುಳು ಬೀಳುತ್ತಿರಲಿಲ್ಲ. ಸಂಗ್ರಹ ಮಾಡಿ ಒಂದು ವರ್ಷ ಕಳೆದಿರುವುದರಿಂದ ಜೋಳದ ದಾಸ್ತಾನಿನಲ್ಲಿ ಹುಳು ಬಿದ್ದಿವೆ. ಇದೀಗ ಹುಳಗಳು ತಿನ್ನುತ್ತಿರುವ ಜೋಳವನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಗೋದಾಮಿನ ವ್ಯವಸ್ಥಾಪಕರು ಮಾತನಾಡಿ, ನಮಗೆ ಸರ್ಕಾರದಿಂದ ರಿಲೀಸಿಂಗ್ ಆರ್ಡರ್ ಬಂದಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದಾರೆ. ಇನ್ನೂ ಮತ್ತೊಂದೆಡೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ.