ವಿಜಯಸಾಕ್ಷಿ ಸುದ್ದಿ, ಗದಗ : ಹಗಲಿನಲ್ಲಿಯೇ ದರೋಡೆಗಿಳಿದು, ಕ್ರೌರ್ಯ ಮೆರೆಯುತ್ತ, ಪೊಲೀಸರ ಹೆಸರಿನಲ್ಲಿಯೇ ಅಮಾಯಕರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಅರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, ಸ್ಥಳ ಮಹಜರಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ತನ್ನ ವಕ್ರಬುದ್ಧಿ ತೋರಿಸಲು ಹೊರಟ ಆರೋಪಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.
ಸಂಜಯ್ ಕೊಪ್ಪದ ಎನ್ನುವ ಕುಖ್ಯಾತ ರೌಡಿಶೀಟರ್ ಗದಗ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳ ಪೊಲೀಸರಿಗೆ ವಾಂಟೆಡ್ ಆಗಿದ್ದ. ಜುಲೈ ತಿಂಗಳ 3ರಂದು ಕಣಗಿನಹಾಳ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ತಾನು ಪೊಲೀಸ್ ಎಂದು ಹೇಳಿ ಬೆದರಿಕೆ ಹಾಕಿ, ಅಮಾಯಕನ ಮೇಲೆ ಹಲ್ಲೆ ಮಾಡಿ, ಆತ ಧರಿಸಿದ್ದ 5.85 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಆರೋಪವಿತ್ತು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿದ್ದ ಗದಗ ಗ್ರಾಮಾಂತರ ಪೊಲೀಸರು, ಆರೋಪಿ ಸಂಜಯ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಗುರುವಾರ ಬೆಳಿಗ್ಗೆ ಆರೋಪಿಯೊಂದಿಗೆ ಸ್ಥಳ ಮಹಜರಿಗೆ ಹೋಗಿದ್ದ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಯೋಜಿಸಿದ್ದ.
ಸ್ಥಳಕ್ಕೆ ತೆರಳುತ್ತಿದ್ದಂತೆ ರೌಡಿಶೀಟರ್ ಸಂಜಯ್, ಪೊಲೀಸ್ ಸಿಬ್ಬಂದಿ ಪ್ರಕಾಶ್ ಗಾಣಿಗೇರ್ ಮೇಲೆ ಕಲ್ಲೆಸೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಈ ವೇಳೆ ಪಿಎಸ್‌ಐ ಸಂಗಮೇಶ್ ಶಿವಯೋಗಿ ಆರೋಪಿ ಸಂಜಯ್ ಕೊಪ್ಪದ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಹೆಡ್ ಕಾನ್ಸ್ಟೇಬಲ್ ಪ್ರಕಾಶ್ ಅವರಿಗೂ ಕಾಲು ಹಾಗೂ ಕೈಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಡಿಷನಲ್ ಎಸ್ಪಿ ಎಂ.ಬಿ. ಸಂಕದ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಆರೋಪಿ ಸಂಜಯ್ ವಿರುದ್ಧ ಗದಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದರೋಡೆ, ಹಲ್ಲೆ ಇತ್ಯಾದಿ 12ಕ್ಕೂ ಹೆಚ್ಚು ಪ್ರಕರಣಗಳಿವೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಮ್ಮ ಪೊಲೀಸರು ಗಂಡು ಹಾರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.