ಚಿತ್ರದುರ್ಗ: ಹೊಸ ವರ್ಷದ ಸಂಭ್ರಮದ ನಡುವೆ ಎಣ್ಣೆ ಏಟಿನಲ್ಲಿ, ಸ್ವೀಟ್ ಮಾರ್ಟ್ ಮಾಲೀಕನ ಮೇಲೆ ಪುಡಿ ರೌಡಿಗಳು ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗದ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ. ಜನವರಿ 1ರ ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ಅಟ್ಟಹಾಸ ನಡೆದಿದ್ದು, ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸ್ವೀಟ್ ಮಾರ್ಟ್‌ಗೆ ನುಗ್ಗಿದ್ದ ನಾಲ್ವರು ಯುವಕರು ತಿನಿಸು ಸೇವಿಸಿ ಹಣ ನೀಡದೆ ಹೊರಟಿದ್ದರು. ಈ ವೇಳೆ ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ಕೋಪಗೊಂಡು ಯುವಕರು ಮತ್ತೆ ಅಂಗಡಿಯೊಳಗೆ ನುಗ್ಗಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಅದಲ್ಲದೆ ಅಂಗಡಿಯಲ್ಲಿದ್ದ ಸಿಕ್ಕಸಿಕ್ಕ ವಸ್ತುಗಳನ್ನು ಎತ್ತಿ ಮಾಲೀಕನ ಮೇಲೆ ಎಸೆದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.
ಈ ಘಟನೆ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.
ಪ್ರತಿನಿತ್ಯ KSRTC ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳ ಉಪಟಳ ಹೆಚ್ಚಾಗುತ್ತಿದ್ದು, ಎಣ್ಣೆ ಹಾಗೂ ಗಾಂಜಾ ಏಟಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಏನು ಕ್ರಮ ಕೈಗೊಳ್ಳುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.



