ಬೆಂಗಳೂರು:- ಹಾಸನ ದುರಂತ ಕೇಸ್ ಗೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಕೊಡಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಗಣೇಶೋತ್ಸವ ಸಂದರ್ಭದಲ್ಲಿ ಹೀಗೆ ಆಗಿದ್ದು ನೋವು ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಸರ್ಕಾರ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಮೃತರೆಲ್ಲ ಹಳ್ಳಿಯವರು, ಹೀಗಾಗಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ನಾನು ಹಾಸನಕ್ಕೆ ಹೋಗ್ತಿದ್ದೀನಿ, ಡಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆಗೂ ಭೇಟಿ ಮಾಡುತ್ತೇನೆ. ಸರ್ಕಾರ ಗಾಯಾಳುಗಳನ್ನು ಬೆಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.
ಧರ್ಮಸ್ಥಳ ಕೇಸ್ ತನಿಖೆ ವಿಳಂಬ ವಿಚಾರವಾಗಿ ಮಾತನಾಡಿ, ಸರ್ಕಾರ ಯಾರನ್ನೋ ರಕ್ಷಣೆ ಮಾಡೋಕೆ ತನಿಖೆಯನ್ನು ವಿಳಂಬ ಮಾಡಿಸುತ್ತಿದೆ. ಎಸ್‌ಐಟಿಗೆ ಬುರುಡೆ ಅಗೆಯೋದ್ರಲ್ಲಿ ಇದ್ದ ಉತ್ಸಾಹ ತನಿಖೆ ಮಾಡೋದ್ರಲ್ಲಿ ಇಲ್ಲ. ಜಿಂಕೆಯAತೆ ಬುರುಡೆ ಅಗೆದು ಆಮೆಗತಿಯಲ್ಲಿ ತನಿಖೆ ಮಾಡ್ತಿದ್ದಾರೆ. ತನಿಖೆ ನಡೆಯೋದು ನೋಡಿದ್ರೆ ಸರ್ಕಾರವೇ ನಿಧಾನವಾಗಿ ತನಿಖೆ ಮಾಡಿ ಅಂತ ಸೂಚನೆ ಕೊಟ್ಟಂತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.