ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಮ್ಮ ಸಂಘದ ವತಿಯಿಂದ ಭೂಮಿ ಖರೀದಿ ಕಾರ್ಯ ಮುಗಿದು ಕಟ್ಟಡ ನಿರ್ಮಾಣ ಪ್ರಾರಂಭಗೊಂಡರೆ ಅದಕ್ಕೆ 25 ಲಕ್ಷ ರೂ.ಗಳ ಅನುದಾನವನ್ನು ನೀಡುತ್ತೇನೆ. ನಿಮ್ಮ ಸಮಾಜ ನರೇಗಲ್ಲದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಇಂಜಿನಿಯರಿಂಗ್ ವರ್ಕ್ ನಲ್ಲಿ ಭಾನುವಾರ ಜರುಗಿದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಣಜಿಗ ಸಮಾಜದವರು ಬಸವ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ನಿತ್ಯದ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ. ಬಣಜಿಗ ಸಮಾಜ ಬಾಂಧವರು ಒಗ್ಗಟ್ಟಿನಿಂದ ಈ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದು ಒಂದು ಸಾಧನೆಯಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಜಾತಿ ಗಣತಿ ಪ್ರಾರಂಭವಾಗಲಿದೆ. ವೀರಶೈವ ಲಿಂಗಾಯತರು 1.4ಕೋಟಿ ಇದ್ದೇವೆ. ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿ, ಉಪ ಜಾತಿಯಲ್ಲಿ ಬಣಜಿಗ, ರೆಡ್ಡಿ ಹೀಗೆ ನಮೂದಿಸಿದರೆ ನಮ್ಮ ಸಂಖ್ಯೆ ಎಷ್ಟು ಎಂಬುದು ನಿಖರವಾಗಿ ತಿಳಿಯುತ್ತದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ, ತಾಲೂಕು ಸಂಘಗಳ ರಚನೆಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗುವುದೆಂದರು. ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸೇವಾಧಿಕಾರ ಸ್ವೀಕಾರ ಸಮಾರಂಭ ಜರುಗಿತು. ಗಣ್ಯರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ, ರಾಜ್ಯಉಪಾಧ್ಯಕ್ಷ ಅಂದಪ್ಪ ಜವಳಿ, ಜಿಲ್ಲಾಧ್ಯಕ್ಷ ಈಶಣ್ಣ ಮುನವಳ್ಳಿ, ಗೌರವಾಧ್ಯಕ್ಷ ಜಿ.ಎ. ಬೆಲ್ಲದ, ಸಿ.ವಿ. ವಂಕಲಕುಂಟಿ, ವೀರಣ್ಣ ಶೆಟ್ಟರ, ಡಾ. ಎ.ಕೆ. ನಾಶಿ, ರೋಣ ತಾಲೂಕಾ ಅಧ್ಯಕ್ಷ ಮುತ್ತಣ ಸಂಗಳದ, ಗಜೇಂದ್ರಗಡ ತಾಲೂಕಾ ಅಧ್ಯಕ್ಷ ಉಮೇಶ ಮೆಣಸಿಗಿ, ನಾಗೇಶ ಸವಡಿ, ಡಾ. ಶಶಿಕಲಾ ಅಂಗಡಿ, ಎಸ್.ಎ. ಪಾಟೀಲ, ಬಸವರಾಜ ವಂಕಲಕುಂಟಿ, ರಾಜಶೇಖರ ವಂಕಲಕುಂಟಿ, ಚಂದ್ರು ಜೋಳದ, ಬಸವರಾಜ ಜೋಳದ, ಬಸವರಾಜ ಸಂಗಳದ, ಎಸ್.ಎನ್. ಹೂಲಗೇರಿ, ಪ್ರಶಾಂತ ರಂಜಣಗಿ ಸೇರಿದಂತೆ ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ವಿವಿಧ ಗ್ರಾಮಗಳ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.
ಈಗಾಗಲೇ ವೀರಶೈವ ಮಹಾಸಭೆಗೆ ಜಾತಿ ಗಣತಿ ಸೂಕ್ತವಾಗಬೇಕೆಂದು ಮನವಿ ಮಾಡಲಾಗಿದೆ. ಬಣಜಿಗ ಸಮಾಜದ ಸಭಾಭವನಕ್ಕೆ ಈಗಾಗಲೇ ರೋಣ, ಗಜೇಂದ್ರಗಡಕ್ಕೆ 25 ಲಕ್ಷ ರೂ ಅನುದಾನ ನೀಡಲಾಗಿದೆ. ಅದರಂತೆ ಇಲ್ಲಿಯೂ ಸಹ 25 ಲಕ್ಷ ರೂ. ನೀಡುವುದಾಗಿ ತಿಳಿಸಿದರಲ್ಲದೆ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರಿಂದ ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.