ಬೆಳಗಾವಿ: ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಮ್ಮ ಎಸ್‌ಪಿ ಮಹಾರಾಷ್ಟ್ರಕ್ಕೆ ಪತ್ರ ಬರೆದಿದ್ದಾರೆ ಮತ್ತು ನಮ್ಮ ಪೊಲೀಸ್ ತಂಡ ಅಲ್ಲಿಗೆ ಭೇಟಿ ನೀಡಿದೆ. ಆದರೆ ಮಹಾರಾಷ್ಟ್ರ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡಿದರೆ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆ ಅಕ್ಟೋಬರ್ 16ರಂದು ನಡೆದಿದೆ ಎಂದು ತಿಳಿಸಿದರು. ಘಟನೆ ನಡೆದಿರುವುದು ಚೋರ್ಲಾ ಘಾಟ್ ಗಡಿಭಾಗವಾಗಿದ್ದು, ಅದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸಂಪರ್ಕ ಹೊಂದಿದೆ. ಘಟನೆ ನಡೆದ ಸ್ಥಳ ಯಾವ ರಾಜ್ಯದ ವ್ಯಾಪ್ತಿಗೆ ಸೇರಿದೆ ಎಂಬುದು ಮೊದಲು ಸ್ಪಷ್ಟವಾಗಬೇಕಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ಅವರ ಜನರೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ದೂರುದಾರನೇ ಬಂದು ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ಹೇಳಬೇಕು. ಆಗ ಸತ್ಯ ಗೊತ್ತಾಗುತ್ತದೆ” ಎಂದು ಹೇಳಿದರು.
400 ಕೋಟಿ ರೂ. ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಆ ಹಣವನ್ನು ಎಣಿಸಿದವರು ಯಾರು? ಇಲ್ಲಿ ಕಾಂಗ್ರೆಸ್–ಬಿಜೆಪಿ ಎಂಬ ಪ್ರಶ್ನೆಯೇ ಇಲ್ಲ. ಎಲ್ಲ ಪಕ್ಷದವರೂ ಸೇರಿಯೇ ಇರುತ್ತಾರೆ. ಮೊದಲಿಗೆ ಘಟನೆ ಎಲ್ಲಿ ನಡೆದಿದೆ ಎಂಬುದೇ ಗೊತ್ತಿಲ್ಲ” ಎಂದು ತಿಳಿಸಿದರು.



