ಬೆಂಗಳೂರು: ದೇಶಭಕ್ತರು ಎನ್ನುವ RSSನವರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಎಬಿವಿಪಿಯವರು ಮೊದಲು ಮುಸ್ಲಿಮರ ಬಗ್ಗೆ ಹೇಳೋದಿಲ್ಲ. ಶೂದ್ರ ಹುಡುಗರು ಸಿಕ್ಕಿದರೆ ಮೊದಲು ರಾಷ್ಟ್ರ ಕಟ್ಟಬೇಕು ಅಂತಾರೆ. ಆಮೇಲೆ ನಿಧಾನವಾಗಿ ಅವರ ತಲೆಯಲ್ಲಿ ಮುಸ್ಲಿಂ ದ್ವೇಷದ ಗೊಬ್ಬರ ತುಂಬುತ್ತಾರೆ.
ದೇಶಭಕ್ತರು ಎನ್ನುವ ಆರ್‌ಎಸ್‌ಎಸ್‌ನವರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡಲ್ಲ. 52 ವರ್ಷ ಆರ್‌ಎಸ್‌ಎಸ್ ಕಚೇರಿ ಮೇಲೆ ಧ್ವಜ ಹಾರಿಸಿಲ್ಲ. ನಾವೆಲ್ಲ ಸಾಫ್ಟ್ ಹಿಂದುತ್ವದವರಲ್ಲ, ನಾವೆಲ್ಲ ಹಿಂದೂಗಳು. ನಮ್ಮ ಕಾಂಗ್ರೆಸ್‌ನಲ್ಲಿ ಕೆಲವರು ಸಾಫ್ಟ್ ಹಿಂದುತ್ವವಾದಿಗಳಿದ್ದಾರೆ ಎಂದರು.
ಇನ್ನೂ ಬಿಜೆಪಿಯ ದೀನ್ ದಯಾಳ್ ಉಪಾಧ್ಯಾಯವರನ್ನು ಕೊಂದವರು ಯಾರು? ಅವರ ಕೊಲೆ ಮಾಡಿದ್ದು, ಯಾರು ಅಂತಾ ಸಂಘಪರಿವಾರ ಹೇಳಬೇಕು. ದೀನ್ ದಯಾಳ್ ಉಪಾಧ್ಯಾಯ ಕೊಲೆ ಆಗಿದ್ದು ಜನ ಸಂಘದ ಕಡೆಯೇ ತೋರಿಸುತ್ತದೆ. ಇದರ ಬಗ್ಗೆ ಯಾರೂ ಸ್ಪಷ್ಟವಾಗಿ ಹೇಳುತ್ತಲೇ ಇಲ್ಲ ಬಿಜೆಪಿಯವರು. ಆರ್‌ಎಸ್‌ಎಸ್ ಕಾಲಾಳುಗಳೆಲ್ಲ ಬಡವರೇ.
ಅಧಿಕಾರ, ಸಂಪತ್ತು ಪಡೆಯುವವರು ಬೇರೆ, ಜೈಲಿಗೆ ಹೋಗುವವರು ಬೇರೆಯೇ. ಸಂಘ ಪರಿವಾರದ ಸಹವಾಸದಿಂದ ಹೋರಾಟ ಮಾಡಿದವರು ಒಂದೋ ಜೈಲಿಗೆ ಹೋಗಬೇಕು, ಇಲ್ಲ ಸ್ಮಶಾನ ಸೇರಬೇಕು. ಬೊಮ್ಮಾಯಿ ಮಗ, ಯಡಿಯೂರಪ್ಪ ಮಗ ಏನಾದರೂ ಬೀದಿಯಲ್ಲಿ ಹೋರಾಟ ಮಾಡಿದ್ರಾ? ಹೋರಾಟ ಮಾಡೋದೆಲ್ಲ ಪುನೀತ್ ಕೆರೆಹಳ್ಳಿ ಥರದವರು. ಬಿಸಿಸಿಐ ಅಧ್ಯಕ್ಷ ಆಗೋದು ಜಯ್ ಶಾ ಎಂದು ಟಾಂಗ್ ಕೊಟ್ಟರು.