ಬೆಂಗಳೂರು: ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿಷೇಧ) ಕಾಯಿದೆ, ಪಿಟಿಸಿಎಲ್ ಕಾಯಿದೆ ಅಡಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಉಪವಿಭಾಗಾಧಿಕಾರಿಗಳು (SDO) ಹೊರಡಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಧಿ ಮುಗಿಯುವ ಮುನ್ನವೇ, ತಹಶೀಲ್ದಾರ್‌ಗಳು ಕಂದಾಯ ದಾಖಲೆಗಳನ್ನು (RTC) ಬದಲಾವಣೆ ಮಾಡುವುದು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದೇ ವೇಳೆ, ಉಪವಿಭಾಗಾಧಿಕಾರಿಗಳ ಆದೇಶದ ತಕ್ಷಣ ಯಾವುದೇ ಕಂದಾಯ ದಾಖಲೆ ಬದಲಾವಣೆ ಮಾಡಬಾರದು ಎಂಬುದಾಗಿ ತಹಶೀಲ್ದಾರ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಕ್ಷಣ ಸುತ್ತೋಲೆ ಹೊರಡಿಸಲು ನ್ಯಾಯಾಲಯ ಸೂಚಿಸಿದೆ. ಮೇಲ್ಮನವಿ ಸಲ್ಲಿಸಲು ಇರುವ ಅವಧಿ ಪೂರ್ಣಗೊಳ್ಳುವವರೆಗೂ ತಹಶೀಲ್ದಾರ್‌ಗಳು ಕಾಯಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪಿಟಿಸಿಎಲ್ ಕಾಯಿದೆಯಡಿ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ ದಿನವೇ ಕಂದಾಯ ದಾಖಲೆಗಳನ್ನು ಜಮೀನಿನ ಮೂಲ ಮಾಲೀಕರ ಹೆಸರಿಗೆ ಬದಲಾಯಿಸಿದ್ದ ತಹಶೀಲ್ದಾರ್ ಅವರ ಕ್ರಮವನ್ನು ಪ್ರಶ್ನಿಸಿ ಜಯಲಕ್ಷ್ಮಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಉಪವಿಭಾಗಾಧಿಕಾರಿಗಳ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಇರುವಾಗಲೇ, ಅದನ್ನು ಕಾಯದೆ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಿರುವ ಹಲವು ಪ್ರಕರಣಗಳು ನ್ಯಾಯಾಲಯದ ಗಮನಕ್ಕೆ ಬಂದಿವೆ. ಇಂತಹ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದ್ದು, ಮುಂದುವರಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸಹಾಯಕ ಆಯುಕ್ತರ ಆದೇಶ ಹೊರಬಿದ್ದ ಕೂಡಲೇ, ಮೇಲ್ಮನವಿ ಸಲ್ಲಿಸಲು ಇರುವ ಅವಧಿಯನ್ನು ಕಾಯದೇ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾಯಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಾನೂನು ವಿರೋಧಿ ನಡೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪಿಟಿಸಿಎಲ್ ಕಾಯಿದೆಯ ಸೆಕ್ಷನ್ 5 ಪ್ರಕಾರ, ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ಅಕ್ರಮವಾಗಿ ವರ್ಗಾಯಿಸಲಾದ ಭೂಮಿಯನ್ನು ವಾಪಸ್ ಪಡೆದು, ಮೂಲ ಹಕ್ಕುದಾರರು ಅಥವಾ ಅವರ ಕಾನೂನು ವಾರಸುದಾರರಿಗೆ ಮರುಸ್ಥಾಪಿಸಲು ಆದೇಶ ನೀಡುವ ಅಧಿಕಾರ ಹೊಂದಿದ್ದಾರೆ.
ಆದರೆ, ಸೆಕ್ಷನ್ 5ಎ ಅಡಿ ಉಪವಿಭಾಗಾಧಿಕಾರಿಗಳ ಆದೇಶದ ವಿರುದ್ಧ ಮೂರು ತಿಂಗಳೊಳಗೆ ಜಿಲ್ಲಾಧಿಕಾರಿಗಳ ಮುಂದೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಈ ಅವಧಿ ಮುಗಿಯುವ ಮುನ್ನ ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿ, ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ.



