ವಿಜಯಸಾಕ್ಷಿ ಸುದ್ದಿ, ಧಾರವಾಡ: ಕೆಪಿಎಂಇ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳ ನೋಂದಣಿಗಾಗಿ ಹಾಗೂ ನೋಂದಣಿ ನವೀಕರಣಕ್ಕಾಗಿ ಯಾರಿಗೂ ವಿನಂತಿಸುವ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಪರಿಶೀಲಿಸಿ, ಕೆಪಿಎಂಇ ನಿಯಮಾನುಸಾರ ಇದ್ದಲ್ಲಿ 90 ದಿನಗಳಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ಎಲ್ಲವನ್ನು ಪಾರದರ್ಶಕತೆಯಿಂದ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಸಭೆ ಜರುಗಿಸಿ ಮಾತನಾಡಿದರು.
ಎಲ್ಲ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಅವಳಿ ನಗರದಲ್ಲಿ ಕೆಲವು ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ದರ ವಸೂಲು ಮಾಡುತ್ತಿರುವುದು, ಸಮರ್ಪಕ ಚಿಕಿತ್ಸೆ ನೀಡದೆ ಕೊನೆಯ ಹಂತದಲ್ಲಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವುದು, ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ ಎಂದು ದೂರು ಬಂದಿವೆ. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕೆಪಿಎಂಇ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ನಿಯಮಾನುಸಾರ, ಉತ್ತಮ ರೀತಿಯಲ್ಲಿ ಆಸ್ಪತ್ರೆ ನಡೆಸಿ, ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು. ಚಿಕಿತ್ಸೆಗೆ ದಾಖಲಾಗುವವರ ಬಗ್ಗೆ ಕಾಳಜಿ, ಕರುಣೆ ಇರಲಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಸ್ವಾಗತಿಸಿ, ಸಭೆಯಲ್ಲಿ ಕೆಪಿಎಂಇ ಕಾಯ್ದೆಯ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು.
ವೇದಿಕೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡಿ, ಕೆಪಿಎಂಇ ನೋಂದಣಿ ಅರ್ಜಿ ಪರಿಶೀಲನೆ ಹಾಗೂ ಸ್ಥಳ ಪರಿವೀಕ್ಷಣಾ ಸಮಿತಿ ಸದಸ್ಯ ಡಾ. ದೇವರಾಜ ವಿರೂಪಾಕ್ಷಯ್ಯ ರಾಯಚೂರು ಇದ್ದರು.
ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಮುಖ್ಯವಾಗಿದೆ. ಕೆಪಿಎಂಇ ಕಾಯ്ദೆಯಡಿ ನೋಂದಣಿ ಆಗಿರುವ ಆಸ್ಪತ್ರೆಗಳ ಸಹಕಾರಬೇಕು. ನಕಲಿ ವೈದ್ಯರ, ನಕಲಿ ಆಸ್ಪತ್ರೆ, ನಕಲಿ ಔಷಧಿಗಳನ್ನು ತಡೆಗಟ್ಟಲು, ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ನಕಲಿ ವೈದ್ಯರು, ಆಸ್ಪತ್ರೆಗಳು ಇದ್ದಲ್ಲಿ ಸಾರ್ವಜನಿಕರು ಮತ್ತು ವೈದ್ಯರು ಆರೋಗ್ಯ ಇಲಾಖೆಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬಹುದು ಎಂದು ಡಿಸಿ ದಿವ್ಯ ಪ್ರಭು ತಿಳಿಸಿದರು.



