ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಾಲೆಹೊಸೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಸೋಮವಾರ ಸೂರಣಗಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕೀ ನಾಯ್ಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿನ ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿರುತ್ತದೆ. ಅವುಗಳಿಗೆ ಸರಿಯಾಗಿ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುವದು ಅವಶ್ಯವಾಗಿದೆ. ಬಾಲೆಹೊಸೂರು ಗ್ರಾಮದ ಎಲ್ಲ ಸರಕಾರಿ ಶಾಲೆಗಳಲ್ಲಿ ಸಮುದಾಯದ ಸಹಭಾಗಿತ್ವದಿಂದಾಗಿ ಮಕ್ಕಳ ಕಲಿಕೆಗೆ ಹಾಗೂ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾದಂತಹ ವಾತಾವರಣವಿದ್ದು, ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯಕಾರಿಯಾಗಿದೆ. ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು ಸಮನ್ವಯ ಸಾಧಿಸಿ ಕಲಿಕೆಯನ್ನು ಪ್ರೋತ್ಸಾಹಿಸುವ ಕಾರ್ಯ ಇಲ್ಲಿ ನಡೆಯುತ್ತಿದ್ದು, ಇದು ಇತರ ಗ್ರಾಮಗಳಿಗೂ ಮಾದರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಮ್‌ಸಿ ಅಧ್ಯಕ್ಷ ಹಾಲೇಶ್ ಜಾಲವಾಡಗಿ ವಹಿಸಿದ್ದರು. ಪರಶುರಾಮ್ ಮೈಲಾರಿ, ಸಿದ್ದಪ್ಪ ನೆನಗನಹಳ್ಳಿ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮದ ಶಿಕ್ಷಣ ಪ್ರೇಮಿಗಳು, ಎಸ್‌ಡಿಎಮ್‌ಸಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಂ.ಎ. ನದಾಫ್, ಬಿಆರ್‌ಪಿ ಬಿ.ಎಂ. ಯರಗುಪ್ಪಿ ಸಿಆರ್‌ಪಿಗಳಾದ ಆರ್.ಮಹಾಂತೇಶ್, ಜ್ಯೋತಿ ಗಾಯಕ್ವಾಡ್, ಎಲ್.ಎಫ್. ಮಠದ ಹಾಜರಿದ್ದರು.
ವಿವಿಧ ಶಾಲೆಗಳಿಂದ ಆಗಮಿಸಿದ ಪ್ರಧಾನ ಗುರುಗಳು, ಸಹ ಶಿಕ್ಷಕರು, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು, ನಿರ್ಣಾಯಕರು ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯರಾದ ಸಿದ್ದಪ್ಪ ಸಜ್ಜಗಾರ ಸ್ವಾಗತಿಸಿದರು, ಶೋಭಾ ನಡುವಿನಮನಿ ನಿರೂಪಿಸಿದರು, ಗಿರೀಶ್ ಕುಬಸದ ವಂದಿಸಿದರು.