ವಿಜಯಸಾಕ್ಷಿ ಸುದ್ದಿ, ಗದಗ: ಸ್ವ ಉದ್ಯೋಗದೊಂದಿಗೆ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು ಎಂದು ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್ ಅಭಿಪ್ರಾಯಪಟ್ಟರು.
ಅವರು ಮುಳಗುಂದ ವಿಶ್ವ ಬ್ಯಾಂಕ್ ನೆರವಿನ ರೀವಾರ್ಡ್ ಯೋಜನೆಯಡಿಯಲ್ಲಿ ನಡೆದ ಉದ್ಯಮಶೀಲತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ರೀವಾರ್ಡ್ ಯೋಜನೆಯಡಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುವ ಉದ್ದೇಶದಿಂದ ಆರ್ಸೆಟಿ ಸಹಯೋಗದಲ್ಲಿ ಸ್ವ ಉದ್ಯೋಗ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಗಳ ಕುರಿತಂತೆ ವಿವರವಾದ ಮಾಹಿತಿ ನೀಡಲಾಗಿದ್ದು, ತರಬೇತಿಗಳ ಪ್ರಯೋಜನ ಪಡೆದುಕೊಳ್ಳಲು ಮಹಿಳೆಯರು ಮುಂದಾಗಬೇಕು ಎಂದರು.
ಆರ್ಸೆಟಿ ವತಿಯಿಂದ ನೀಡಲಾಗುವ ತರಬೇತಿಗಳು ಹಾಗೂ ಅವುಗಳ ಪ್ರಯೋಜನಗಳ ಬಗ್ಗೆ ನವೀನ್ ಹಿರೇಗೌಡ್ರ ಮಾಹಿತಿ ನೀಡಿದರು.
ಶೇಖರ್ ನಾಯಕ ಮಾತನಾಡಿ, ಎಲ್ಲಾ ಸ್ವಸಹಾಯ ಸಂಘಗಳು ತಮ್ಮ ಸಂಘಗಳ ದಾಖಲಾತಿಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಅಂದಾಗ ಮಾತ್ರ ಯೋಜನೆಯ ಲಾಭ ಪಡೆಯಲು ಸಾಧ್ಯ ಎಂದು ಹೇಳಿದರು.
ಕೃಷಿ ಅಧಿಕಾರಿ ರಾಜರಾಜೇಶ್ವರಿ ಸಜ್ಜನರ, ಆರ್ಸೆಟಿ ನಿರ್ದೇಶರಾದ ಶಿವಕುಮಾರ್, ಮಂಜುನಾಥ ಬ್ಯಾಳ್ ಸೇರಿದಂತೆ ರೀವಾರ್ಡ್ ಯೋಜನೆಯ ಸಿಬ್ಬಂದಿ ಹಾಜರಿದ್ದರು.



