ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 206 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೊನೆಯವರೆಗೂ ಹೋರಾಟ ನೀಡಿದ ರಾಜಸ್ಥಾನ ತಂಡ 205 ರನ್ ಕಲೆಹಾಕಿ ಕೇವಲ 1 ರನ್‌ನಿಂದ ಸೋಲೊಪ್ಪಿಕೊಂಡಿತು.
ರಾಜಸ್ಥಾನ್ ಪರ ರಿಯಾನ್ ಪರಾಗ್ 95 ರನ್ಗಳ ನಾಯಕನ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಕೋಲ್ಕತ್ತಾ ತಂಡ ಆಡಿರುವ 11 ಪಂದ್ಯಗಳಲ್ಲಿ 11 ಅಂಕಗಳನ್ನು ಸಂಪಾದಿಸಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯುವ ಭರವಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
ರಾಜಸ್ಥಾನದ ಪರ ರಿಯಾನ್ ಪರಾಗ್ 45 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ಸಿಡಿಸಿ 95 ರನ್ ಕಲೆ ಹಾಕಿದರು. ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 1 ಸಿಕ್ಸರ್ 5 ಬೌಂಡರಿ ನೆರವಿನಿಂದ 34 ರನ್, ಶಿಮ್ರಾನ್ ಹೆಟ್ಮೆಯರ್ 23 ಎಸೆತಗಲ್ಲಿ 29 ರನ್, ಶುಭಂ ದುಬೆ 14 ಎಸೆತಗಳಲ್ಲಿ 25 ರನ್ ಕಲೆ ಹಾಕಿದರು.
ಕೆಕೆಆರ್ ಪರ ವರುಣ್ ಚಕ್ರವರ್ತಿ 2, ಹರ್ಷಿತ್ ರಾಣಾ 2, ಮೊಯಿನ್ ಅಲಿ 2, ವೈಭವ್ ಅರೋರಾ 1 ವಿಕೆಟ್ ಕಬಳಿಸಿದರು.ಕೆಕೆಆರ್ ಪರ ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ ಅಜೇಯ 57 ರನ್ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು. ಅಜಿಂಕ್ಯ ರಹಾನೆ 30,ಅಂಗ್ಕ್ರಿಸ್ ರಘುವಂಶಿ 44, ರಹ್ಮನುಲ್ಹಾ ಗುರ್ಬಜ್ 35 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಕೇವಲ 13 ರನ್ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಸುನಿಲ್ ನರೈನ್ ಕೇವಲ ಯುಧ್ವೀರ್ ಸಿಂಗ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. 2ನೇ ವಿಕೆಟ್ಗೆ ರೆಹ್ಮನುಲ್ಲಾ ಗುರ್ಬಜ್ ಹಾಗೂ ಅಜಿಂಕ್ಯ ರಹಾನೆ 56 ರನ್ಗಳಿಸಿದರು. ಗುರ್ಬಜ್ 25 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 35 ರನ್ಗಳಿಸಿ ತೀಕ್ಷಣ ಬೌಲಿಂಗ್ನಲ್ಲಿ ಹೆಟ್ಮೇಯರ್ಗೆ ಕ್ಯಾಚ್ ನೀಡಿದರು. ನಂತರ ರಹಾನೆ ಜೊತೆಗೂಡಿದ ರಘವಂಶಿ ನಿಧಾನವಾಗಿ ವಿಕೆಟ್ ಉಳಿಸಿಕೊಂಡು 31 ಎಸೆತಗಳಲ್ಲಿ 42 ರನ್ಗಳ ಜೊತೆಯಾಟ ಆಡಿದರು.
ರಹಾನೆ 24 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 30 ರನ್ಗಳಿಸಿದರೆ, ರಘವಂಶಿ 31 ಎಸೆತಗಳಲ್ಲಿ 5 ಬೌಂಡರಿ ಸಹಿತ 44 ರನ್ಗಳಿಸಿದರು. ರಘುವಂಶಿ ರಸೆಲ್ ಜೊತೆಗೆ 61 ರನ್ಗಳ ಜೊತೆಯಾಟ ಆಡಿದರು.ಆರ್‌ಆರ್ ಪರ ಜೋಫ್ರಾ ಆರ್ಚರ್, ಯುದ್ವೀರ್ ಸಿಂಗ್, ಮಹೇಶ್ ತೀಕ್ಷಣ, ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.