ಬೆಂಗಳೂರು: ಕೋಗಿಲು ಬಡಾವಣೆ ಅಕ್ರಮವಾಸಿಗಳ ತೆರವು ಸಂಬಂಧ ಘಟನಾವಳಿಯ ತನಿಖೆಯನ್ನು ಎನ್‍ಐಎಗೆ ವಹಿಸುವಂತೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಆಗ್ರಹಿಸಿದ್ದಾರೆ. ಯಲಹಂಕದ ಕೋಗಿಲು ಬಡಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೇತೃತ್ವದ ಸತ್ಯಶೋಧನ ತಂಡವು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರಿಗೆ ವರದಿಯನ್ನು ಸಲ್ಲಿಸಿತು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇರಳದ ಸಿಎಂ, ಕೆ.ಸಿ.ವೇಣುಗೋಪಾಲ್ ಸಾಕಷ್ಟು ಕೂಗಾಡಿದರಲ್ಲವೇ? ತೆರವಾದವರ ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಕೇರಳದವರಿಲ್ಲ. ಕೇರಳದ ಮತಕ್ಕಾಗಿ ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕೇರಳದವರು ಇರಲಿ ಬಿಡಲಿ; ಅಲ್ಲಿನ ರಾಜಕಾರಣಕ್ಕಾಗಿ ನಮ್ಮ ರಾಜ್ಯವನ್ನು ಬಲಿ ಪಡೆಯುವ ಕೆಲಸ ಮಾಡಿದ್ದಾರೆ. ಒಬ್ಬರೇ ಒಬ್ಬರು ಕೇರಳದವರಿಲ್ಲ. ಒಬ್ಬರೇ ಒಬ್ಬರು ಕ್ರಿಶ್ಚಿಯನ್ ಇದ್ದಾರೆ. ನಮಗೆ ಸಿಕ್ಕಿದ ಪಟ್ಟಿಯಲ್ಲಿ ಬಹುತೇಕ ಎಲ್ಲರೂ ಮುಸ್ಲಿಮರೇ ಇದ್ದಾರೆ. ಬೆಂಗಳೂರಿನಲ್ಲಿ ಸರಕಾರಿ ಜಾಗದಲ್ಲಿ ಹೊಸದಾಗಿ ಗುಡಿಸಲು ಹಾಕಿಕೊಂಡವರನ್ನು ಕೂಡಲೇ ಸರಕಾರ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿರುವ 100 ಚಿಂದಿ ಆಯುವವರ ಪೈಕಿ ಶೇ 95 ಜನರು ರೋಹಿಂಗ್ಯಾಗಳೇ ಇದ್ದಾರೆ. ಅವರ ಬಳಿ ಕೆಲವು ಕಾರ್ಡ್‍ಗಳಿವೆ. ನಾವು ಹೋಗಿ ಕೇಳಿದಾಗ ಕೊಟ್ಟಿಲ್ಲ. ವಲಸಿಗರ ಕಾರ್ಡ್ ಅವರ ಬಳಿ ಇದೆ. ಹಣ ಕೊಟ್ಟು ಗಡಿ ದಾಟಿ ಬಂದುದಾಗಿ ಹೇಳುತ್ತಾರೆ. ಪಶ್ಚಿಮ ಬಂಗಾಲದ ಮೂಲಕ ಬರಲು ವ್ಯವಸ್ಥೆ ಕಲ್ಪಿಸುವ ತಂಡವೇ ಇದೆ ಎಂದು ಅವರೇ ಹೇಳಿದ್ದಾಗಿ ವಿವರಿಸಿದರು.
ಅವರ ಭಾಷೆ ಹಿಂದಿಯೂ ಅಲ್ಲ; ಉರ್ದುವೂ ಅಲ್ಲ. ಅದು ನಮಗೆ ಅರ್ಥವೂ ಆಗುವುದಿಲ್ಲ ಎಂದು ತಿಳಿಸಿದರು. ಬಾಂಗ್ಲಾ ಮತ್ತು ರೋಹಿಂಗ್ಯಾ ಭಾಷೆ ಕೇಳಿದೊಡನೆ ಗೊತ್ತಾಗುತ್ತದೆ. ಮೊನ್ನೆ ಟಿ.ವಿ ಚಾನೆಲ್ ಒಂದರಲ್ಲಿ ಮಹಿಳೆಯೊಬ್ಬರು ಜೈ ಬಾಂಗ್ಲಾ ಹೇಳಿದ್ದನ್ನು ಕೇಳಿದ್ದೇವೆ ಎಂದು ತಿಳಿಸಿದರು. ಅವರು ರಾಜಾರೋಷವಾಗಿ ಇದ್ದಾರೆ ಎಂದರು.



