ಕರ್ನಾಟಕದ ಪ್ರಸಿದ್ಧ ಪರಿಸರ ಸೇತುವೆ ಸಾಲು ಮರದ ತಿಮ್ಮಕ್ಕ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಮ್ಮ ಜೀವನದಲ್ಲಿ ಮಕ್ಕಳಿಲ್ಲದ ನೋವನ್ನು ಮರೆತು 8000ಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರೀಯ ನಾಗರಿಕ ಪ್ರಶಸ್ತಿ ಹಾಗೂ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರಕಿದ್ದು, 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು. ಬಿಬಿಸಿ ರೇಡಿಯೋ ನಡೆಸಿದ ದೇಶದ ಅತಿ ಪ್ರಮುಖ 100 ಸಾಧಕ ಮಹಿಳೆಯರ ಪಟ್ಟಿಯಲ್ಲಿಯೂ ತಿಮ್ಮಕ್ಕ ಅವರ ಹೆಸರು ಒಬ್ಬರಂತೆ ಇದ್ದುದು ಗಮನಾರ್ಹ.
ತಿಮ್ಮಕ್ಕ ಅಗಲಿಕೆಗೆ ಭಾರತದ ಚಲನಚಿತ್ರ ಹಾಗೂ ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ತಿಮ್ಮಕ್ಕ ಅವರ ನಿಧನಕ್ಕೆ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಸಹ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
“ಕರ್ನಾಟಕದ ಒಂದು ಸಣ್ಣ ಹಳ್ಳಿಯಿಂದ ಬಂದ ತಿಮ್ಮಕ್ಕ ಮತ್ತು ಅವರ ಪತಿ ಮಕ್ಕಳಿಲ್ಲದ ಕಾರಣ, ಗಿಡಗಳನ್ನು ಮಕ್ಕಳಂತೆ ಬೆಳೆಸಲು ಮುಂದಾದರು. ಪರಿಶುದ್ಧ ಪ್ರೀತಿ ಮತ್ತು ದಿನನಿತ್ಯದ ಶ್ರಮದಿಂದ, 375 ಆಲದ ಮರಗಳು ಸೇರಿದಂತೆ 8000ಕ್ಕೂ ಅಧಿಕ ಮರಗಳನ್ನು ನೆಟ್ಟು ಪೋಷಿಸಿದರು. ಅಧಿಕಾರ ಅಥವಾ ಸಂಪತ್ತಿಗಾಗಿ ಅವರು ಯಾವತ್ತೂ ಕೆಲಸಮಾಡಲಿಲ್ಲ. ಭೂಮಿಯನ್ನು ಪ್ರೀತಿಸುವ ಬೇರೆಯವರಿಗೂ ಮಾದರಿಯಾಗಿದ್ದರು. ಇವರ ಸೇವೆ ನಮ್ಮೆಲ್ಲರಿಗೂ ಪ್ರೇರಣೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಸಾಲು ಮರದ ತಿಮ್ಮಕ್ಕ ಅವರ ಅಗಲಿಕೆ ನಾಡಿಗೆ ದೊಡ್ಡ ನೋವನ್ನುಂಟುಮಾಡಿದರೂ, ಅವರ ಪರಿಸರ ಸೇವೆ, ಶ್ರದ್ಧೆ ಮತ್ತು ಪರಿಶ್ರಮ ಭವಿಷ್ಯದ ತಲೆಮಾರಿಗೆ ಮಾದರಿ ಆಗಿ ಉಳಿಯಲಿದೆ ಎಂದು ಪವನ್ ಕಲ್ಯಾಣ್ ಬರೆದುಕೊಂಡಿದ್ದಾರೆ.


