ಚಾಮರಾಜನಗರ: ಹುಲಿಗಳ ದಾಳಿಗೆ ಮೂವರು ರೈತರು ಬಲಿಯಾದ ಘಟನೆಗಳ ಬಳಿಕ ಸ್ಥಗಿತಗೊಂಡಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಸೇವೆ ಇದೀಗ ಪುನರಾರಂಭಗೊಂಡಿದೆ. ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಆರಂಭಿಸಲಾಗಿದೆ.
ಸಫಾರಿ ಅವಧಿಯನ್ನು ಎಂಟು ಗಂಟೆಯಿಂದ ಐದು ಗಂಟೆಗೆ ಇಳಿಸಲಾಗಿದೆ. ಬೆಳಿಗ್ಗೆ 6:30–9 ಮತ್ತು ಸಂಜೆ 3:30–6ರವರೆಗೆ ಮಾತ್ರ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ವಾಹನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿ 50% ಮಾತ್ರ ಕಾರ್ಯನಿರ್ವಹಣೆಗೆ ಇಡಲಾಗಿದೆ.
ಮೇಲುಕಾಮನಹಳ್ಳಿ ಕೇಂದ್ರದಿಂದ ಅರಣ್ಯ ಪ್ರವೇಶ ದ್ವಾರದವರೆಗೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೂ ಹುಲಿ ದಾಳಿ ಪ್ರಕರಣಗಳು ನಡೆದ ಹಿನ್ನೆಲೆ ಮಾನವ-ವನ್ಯಜೀವಿ ಸಂಘರ್ಷ ಮತ್ತೆ ಚರ್ಚೆಗೆ ಕಾರಣವಾಗಿದೆ.
ಚಾಮರಾಜನಗರದಲ್ಲಿ ರೈತ ಸಂಘಟನೆಗಳು ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ. ಸಫಾರಿ ಪುನಾರಂಭದಿಂದ ಸಂಘರ್ಷ ಹೆಚ್ಚಾಗಲಿದೆ ಎಂದು ಆರೋಪಿಸಿರುವ ರೈತರು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಫೆಬ್ರವರಿ 25ರಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಂದೆಡೆ ಪ್ರವಾಸೋದ್ಯಮ ಚಟುವಟಿಕೆ ಪುನಶ್ಚೇತನ, ಇನ್ನೊಂದೆಡೆ ರೈತರ ಜೀವಭದ್ರತೆ — ಈ ಎರಡರ ನಡುವೆ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.



