ಭಾರತೀಯ ಸಂಗೀತ ಕ್ಷೇತ್ರದ ದಂತಕಥೆ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಧಾನ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಅಧಿಕೃತ ಘೋಷಣೆ ಮಾತ್ರ ಇನ್ನೂ ಬಾಕಿಯಿದೆ.
ಈ ಚಿತ್ರವನ್ನು ನಿರ್ದೇಶಕ ಗೌತಮ್ ತಿನ್ನನುರಿ ನಿರ್ದೇಶಿಸಲಿದ್ದು, ಗೀತಾ ಆರ್ಟ್ಸ್ ನಿರ್ಮಾಣ ಹೊಣೆ ಹೊತ್ತಿದೆ. ಸಿನಿಮಾ ಈಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ತಯಾರಿ ಕಾರ್ಯಗಳು ಜೋರಾಗಿ ನಡೆಯುತ್ತಿವೆ.
ಶಾಸ್ತ್ರೀಯ ಸಂಗೀತದ ಮೇರು ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆಯಾಗಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಹಜ ಅಭಿನಯದಿಂದಲೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ, ಭಾರತದ ಸಂಗೀತ ಲೋಕದ ಧೀಮಂತೆಯ ಪಾತ್ರಕ್ಕೆ ಹೇಗೆ ಜೀವ ತುಂಬಲಿದ್ದಾರೆ ಎಂಬುದೇ ಈಗ ಚರ್ಚೆಯ ವಿಷಯವಾಗಿದೆ.
ಭಾರತ ರತ್ನ ಪಡೆದ ಮೊದಲ ಗಾಯಕಿಯಾಗಿದ್ದ ಎಂ.ಎಸ್. ಸುಬ್ಬಲಕ್ಷ್ಮಿ, 1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಡು ಹಾಡಿ ಇತಿಹಾಸ ನಿರ್ಮಿಸಿದ್ದರು. ಇಂತಹ ಮಹಾನ್ ವ್ಯಕ್ತಿತ್ವದ ಪಾತ್ರವನ್ನು ಬೆಳ್ಳಿ ಪರದೆಯಲ್ಲಿ ತರುವುದು ಭಾರತೀಯ ಸಿನಿರಂಗಕ್ಕೆ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.



