ವಿಜಯಸಾಕ್ಷಿ ಸುದ್ದಿ, ಗದಗ : ನಂಬಿದ ಭಕ್ತರನ್ನು ಕೈ ಬಿಡದ ಸಾಯಿಬಾಬಾ ಸಕಲ ಜೀವಿಗಳಲ್ಲೂ ನಾನಿದ್ದೇನೆ ಎಂದು ಹೇಳುವ ಮೂಲಕ ಮಾನವ ಸಂಕುಲ ಸೇರಿದಂತೆ ಸಕಲ ಜೀವಿಗಳನ್ನು ಸಂರಕ್ಷಿಸಿದವರು ಎಂದು ಗದುಗಿನ ಧಾರ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಅವರು ಮಂಗಳವಾರ ಗದಗ ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜುಲೈ 20ರವರೆಗೆ ನಡೆಯಲಿರುವ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ-5ರಲ್ಲಿ ಮಾತನಾಡಿದರು.
ಸಕಲರ ಒಳಿತಿಗಾಗಿ ಸಾಯಿಬಾಬಾ ಅಂದು ಶಿರಡಿಯಲ್ಲಿ ಹೊತ್ತಿಸಿದ ಧುನಿ ಇಂದಿಗೂ ಪ್ರಜ್ವಲಿಸುತ್ತಿದೆ. ಜ್ಞಾನ, ಆಶೀರ್ವಾದದ ಪ್ರತೀಕವಾಗಿ ನೆಲೆ ನಿಂತಿರುವ ಧುನಿಯನ್ನು ಇಂದಿನವರೆಗೂ ಸಂರಕ್ಷಿಸಿಕೊಂಡು ಬರಲಾಗಿದೆ.
ಅದೇ ಮಾದರಿಯ ಧುನಿಯನ್ನು ಗದುಗಿನ ಸಾಯಿಬಾಬಾ ಮಂದಿರದ ಬಳಿ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದ್ದು ಈಗಾಗಲೇ ಭೂಮಿಪೂಜೆಯೂ ಆಗಿದೆ ಎಂದರು.
ಭಕ್ತ ಸಮೂಹವನ್ನು ಸನ್ಮಾರ್ಗದೆಡೆಗೆ ತರುವ ಮೂಲಕ ಕುಟುಂಬ, ಸಮಾಜವನ್ನು ಧರ್ಮದ ಪಥದಲ್ಲಿ ಸಾಗುವಂತೆ ಮಾಡುವುದೇ ಯೋಗಿ, ಮಹಾತ್ಮ, ಸಂತರ ಇಂಗಿತ ಎನ್ನಬಹುದು. ಇದರಿಂದ ಒಳಿತೇ ಆಗಿರುವ ಸಂಗತಿ ಶ್ರೀ ಸಾಯಿ ಸಚ್ಚರಿತ್ರೆಯಿಂದ ತಿಳಿದು ಬರುವದು ಎಂದರು.
ಧುನಿಗೆ ದೇಣಿಗೆ ನೀಡಿದ ಡಾ. ಟಿ.ಎನ್. ಗೋಡಿ, ಪ್ರವಚನದ ಪ್ರಸಾದ ಸೇವೆ ವಹಿಸಿಕೊಂಡಿದ್ದ ಡಾ. ಸೌಭಾಗ್ಯಲಕ್ಷ್ಮಿ ಸುನೀಲಗೌಡ ಪೊಲೀಸ್‌ಪಾಟೀಲ, ಶರಣಪ್ಪಗೌಡ್ರ ಗುರುಬಸಪ್ಪ ಯಾದವಾಡ, ಗೋಪಾಲಕೃಷ್ಣ ಟಿ. ಹೇಮಾದ್ರಿ, ಎಸ್.ಬಿ. ಕಣವಿ ಪರಿವಾರವನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.
ನಂಬಿ ಬಂದ ಭಕ್ತರನ್ನು ಅಭಯ ಹಸ್ತ ನೀಡಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಬಾಬಾ ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಅದ್ವಿತೀಯ, ಅಪ್ರತಿಮ ದಿವ್ಯ ಶಕ್ತಿ ಇದ್ದರೂ ತಮಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಭಕ್ತರಿಗೆ ಶ್ರೇಯಸ್ಸು ಬಯಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು ಎಂಬುದನ್ನು ಬಾಬಾ ಅವರ ಹಲವಾರು ಲೀಲೆ, ಪವಾಡ, ಸತ್ಯ ಸಂಗತಿಗಳನ್ನು ಡಾ. ಎಸ್.ಬಿ. ಶೆಟ್ಟರ ವಿವರಿಸಿದರು.
Advertisement