ಸ್ಮರಿಸುವ ಭಕ್ತರಲ್ಲಿ ಬಾಬಾ ನೆಲೆಸಿರುತ್ತಾನೆ : ಡಾ. ಎಸ್.ಬಿ. ಶೆಟ್ಟರ

0
Sai Sachcharita Sermon Series-6 at Gadag Saibaba Mandir
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜ್ಞಾನಿಗಳು ಭಕ್ತರಿಗೆ ಅಜ್ಞಾನದ ಪರದೆಯನ್ನು ಸರಿಸಿ ಜ್ಞಾನ ನೀಡುವರು. ಸರ್ವಾಂತರಯಾಮಿಯಾದ ಬಾಬಾ ಅವರು ಎಲ್ಲೆಡೆಯೂ ಯಾವ ರೂಪದಲ್ಲಾದರೂ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು. ನನ್ನನ್ನು ಸ್ಮರಿಸುವವರ ಬಳಿ ಸದಾ ಇರುತ್ತೇನೆ ಎಂದೆನ್ನುತ್ತಿದ್ದರು ಸಾಯಿಬಾಬಾ ಎಂದು ಗದುಗಿನ ಆಧ್ಯಾತ್ಮಿಕ ಚಿಂತಕ, ತಜ್ಞ ವೈದ್ಯರಾದ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಅವರು ಗದುಗಿನ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗದಗ-ಬೆಟಗೇರಿಯ ಶ್ರೀ ಸಾಯಿಬಾಬಾ ಸತ್ಸಂಗ ಏರ್ಪಡಿಸಿದ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ-6ರಲ್ಲಿ ಪ್ರವಚನ ನೀಡಿ ಮಾತನಾಡಿದರು.
ಆಧ್ಯಾತ್ಮಿಕ ವಿಚಾರದಲ್ಲಿ ಪ್ರಗತಿ ಹೊಂದಲು ಸಾಯಿಬಾಬಾ ಅವರ ಮಹಿಮೆ, ಬಾಬಾ ಅವರ ಬದುಕನ್ನು ಭಕ್ತರು ಅಧ್ಯಯನಶೀಲರಾಗಿ ಓದಿ ಮನನ ಮಾಡಿಕೊಳ್ಳಬೇಕಿದೆ. ಧರ್ಮ ಗುಣ, ದಾನ ಗುಣವನ್ನು ಬೆಳೆಸಿಕೊಳ್ಳಬೇಕು. ಬಿತ್ತಿದ್ದನ್ನು ಬೆಳೆದುಕೊಳ್ಳಬೇಕು ಎಂಬ ಮಾತಿನಂತೆ ಒಳ್ಳೆಯದನ್ನು ಕೇಳಬೇಕು, ಒಳ್ಳೆಯದನ್ನು ಮಾಡಬೇಕು. ಅಂದಾಗ ಒಳ್ಳೆಯದಾಗುವದು ಎಂದರು.
ಕಲಬುರ್ಗಿಯ ಶರಣಬಸಪ್ಪ ಅವರು ದಾಸೋಹಕ್ಕೆ ಹೆಸರಾಗಿದ್ದರು. ದಾಸೋಹ ಜೀವಿಗಳಾಗಿದ್ದ ಅವರು ಸಕಲ ಪ್ರಾಣಿ ಪಕ್ಷೀಗಳಿಗೆ ಆಹಾರ ಧಾನ್ಯ, ನೀರಿನ ವ್ಯವಸ್ಥೆ ಮಾಡುವ ಮೂಲಕ ಸಕಲ ಪ್ರಾಣಿ ಪಕ್ಷಿಗಳಲ್ಲಿ ದೇವರ ಸ್ವರೂಪವನ್ನು ಕಂಡವರು. ಅಂತೆಯೇ ಅವರ ಹೊಲಗದ್ದೆಗಳಲ್ಲಿ ದವಸ ಧಾನ್ಯ ಹುಲುಸಾಗಿ ಬೆಳೆದು ಬಂದಿರುವದನ್ನು ಪುರಾಣ, ಪುಣ್ಯಕಥೆಗಳಿಂದ ತಿಳಿದಿದ್ದೇವೆ. ಹಾಗೆಯೇ ಬಾಬಾ ಅವರೂ ಕೂಡ ಸಕಲ ಪ್ರಾಣಿಗಳಿಗೆ ಲೇಸನ್ನು ಬಯಸಿದವರು ಎಂದು ಬಣ್ಣಿಸಿದರು.
ಧುನಿ ನಿರ್ಮಾಣಕ್ಕೆ ದೇಣಿಗೆ ನೀಡಿದ ಅಶೋಕ ಶೇಖರಪ್ಪ ಹಾದಿ ಪರಿವಾರ, ಪ್ರವಚನದ ಪ್ರಸಾದ ಸೇವೆ ವಹಿಸಿಕೊಂಡಿದ್ದ ಅಶ್ವಥ್ ಸುಲಾಖೆ, ಜಿ.ಬಿ. ಅಬ್ಬಿಗೇರಿ, ಮಲ್ಲಿಕಾರ್ಜುನ ಸರ್ವಿ, ತಿಪ್ಪಣ್ಣ ಮಡಿವಾಳರ, ಬಸವಣ್ಣೆಮ್ಮ ಬಸವರಾಜ ಗಣಾಚಾರಿ, ಮಧುಶ್ರೀ ಮಹಾಂತಸ್ವಾಮಿ ಪೂಜಾರ ಪರಿವಾರದವರಿಗೆ ಅಲ್ಲದೆ ಸಹಕಾರ ನೀಡಿದ ಎಸ್.ಬಿ. ಮಾಂಡ್ರೆ, ಶಬ್ಬೀರ ರಾಜೇಸಾಬ ಮುಲ್ಲಾ, ಮಲ್ಲಪ್ಪ ಕಿಂದರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಾಬಾ ಅವರ ತಮ್ಮ ಕೊನೆಯ ದಿನಗಳನ್ನು ಭಕ್ತರಿಗೆ ತಿಳಿಸಿದ ಬಗೆಯನ್ನು ಹಾಗೂ ಅವರ ಸಮಾಧಿ ನಿರ್ಮಾಣ, ಶಿರಡಿ ಸುಕ್ಷೇತ್ರವಾಗಿ ಬೃಹದಾಕಾರವಾಗಿ ಅಭಿವೃದ್ಧಿ ಹೊಂದಿ ಭಕ್ತ ಸಮೂಹವನ್ನು ಉದ್ಧರಿಸಿದ ಬಗೆಯನ್ನು ಡಾ.ಶೆಟ್ಟರ ವಿಶ್ಲೇಷಿಸಿದರು.

Spread the love
Advertisement

LEAVE A REPLY

Please enter your comment!
Please enter your name here