ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಇಂದು ಬೆಳ್ಳಂಬೆಳಗ್ಗೆಯೇ ಮಹಾರಾಷ್ಟ್ರದ ಥಾಣೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಒಂದರಲ್ಲಿ ವೇಯಿಟರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್ ದಾಸ್ ಹೆಸರಿನ ವ್ಯಕ್ತಿಯನ್ನು ಇಂದು ಮುಂಜಾನೆಯೇ ಪೊಲೀಸರು ಬಂಧಿಸಿದ್ದಾರೆ. ಸೈಫ್ ಅಲಿ ಖಾನ್ ಮನೆಯಿಂದ 35 ಕಿ.ಮೀ ದೂರದಲ್ಲಿರುವ ಕಾಸರ್ವಾದಲಿಯ ಹೀರಾನಂದಾನಿ ಎಸ್ಟೇಟ್ ಬಳಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಈತ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಅಲ್ಲ ಎನ್ನಲಾಗುತ್ತಿದೆ. ಆದರೆ ದಾಳಿ ಕೋರನಿಗೆ ಸಹಾಯ ಮಾಡಿದ ಹಾಗೂ ದಾಳಿಕೋರನ ಜೊತೆಗೆ ಸಂಪರ್ಕದಲ್ಲಿ ಇದ್ದ ವ್ಯಕ್ತಿ ಈತ ಎಂಬ ಕಾರಣಕ್ಕೆ ಬಂಧಿಸಲಾಗಿದ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಆರೋಪಿ ವಿಜಯ್ ದಾಸ್ ಅನ್ನು ಬಂಧಿಸಲಾಗಿದೆ. ಸಿಕ್ಕಿ ಬೀಳುವ ಭಯದಲ್ಲಿ ಈತ ಹೆಸರು ಬದಲಾವಣೆ ಮಾಡಿಕೊಂಡಿದ್ದ ಹಾಗೂ ಮುಂಬೈನಿಂದ ಪರಾರಿಯಾಗುವ ಯತ್ನದಲ್ಲಿದ್ದ ಎನ್ನಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ಘಡದ ರೈಲ್ವೆ ನಿಲ್ದಾಣದಲ್ಲಿ ಆಕಾಶ ಕೈಲಾಶ್ ಕನ್ನೋಜಿಯಾ ಹೆಸರಿನ ಆರೋಪಿಯನ್ನು, ಮಧ್ಯ ಪ್ರದೇಶದಲ್ಲಿ ಮತ್ತೋರ್ವ ಆರೋಪಿಯೊಬ್ಬನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ಮಧ್ಯ ಪ್ರದೇಶದಲ್ಲಿ ವಶಕ್ಕೆ ಪಡೆದ ವ್ಯಕ್ತಿಯನ್ನು ಬಂಧಿಸಲಾಗಿಲ್ಲ ಬದಲಿಗೆ ವಶಕ್ಕೆ ಪಡೆದು ವಿಚಾರಣೆಯನ್ನಷ್ಟೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೈಫ್ ಅಲಿ ಖಾನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.