ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಂಕಿತ ಆರೋಪಿ ಆಕಾಶ್ ಕನೋಜಿಯಾ (31) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆದರೆ ತನಿಖೆಯಲ್ಲಿ ಆಕಾಶ್ ನಿಜವಾದ ಆರೋಪಿ ಅಲ್ಲ ಎಂದು ತಿಳಿದು ಬಂದಿದ್ದು ಬಳಿಕ ಬಿಡುಗಡೆ ಮಾಡಲಾಗಿತ್ತು. ಆದರೆ ಚಾಲಕ ಆಕಾಶ್ ಕನೋಜಿಯಾ ಶಂಕಿತ ಆರೋಪಿಯಾಗಿ ಬಂಧಿಸಿದ್ದ ರಿಂದ ತನ್ನ ಜೀವನ ನಾಶವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೈಫ್ ಪ್ರಕರಣದಲ್ಲಿ ಆರೋಪಿ ಎಂದು ಆಕಾಶ್ ನನ್ನು ಬಂಧಿಸಲಾಗಿದ್ದು ಆತನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದರಿಂದ ಆತ ಕೆಲಸ ಕಳೆದುಕೊಂಡಿದ್ದು ನಿಶ್ಚಯವಾಗಿದ್ದ ಮದುವೆ ರದ್ದಾಗಿದೆ. ಜೊತೆಗೆ ಕುಟುಂಬಕ್ಕೆ ಮಾನಹಾನಿಯಾಗಿದೆ ಎಂದು ಆಕಾಶ್ ಅಳಲು ತೋಡಿಕೊಂಡಿದ್ದಾರೆ.
‘ಮಾಧ್ಯಮಗಳು ನನ್ನ ಫೋಟೋಗಳನ್ನು ತೋರಿಸಲು ಪ್ರಾರಂಭಿಸಿದಾಗ ಮತ್ತು ನಾನು ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಿದಾಗ, ನನ್ನ ಕುಟುಂಬವು ಆಘಾತಕ್ಕೊಳಗಾಯಿತು ಮತ್ತು ಕಣ್ಣೀರು ಹಾಕಿತು. ಮುಂಬೈ ಪೊಲೀಸರ ಒಂದು ತಪ್ಪಿನಿಂದ ನನ್ನ ಜೀವನ ನಾಶವಾಯಿತು. ಸೈಫ್ ಕಟ್ಟಡದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವ ವ್ಯಕ್ತಿ ನಾನಲ್ಲ ಎಂದು ಎಷ್ಟೇ ಒತ್ತಾಯಿಸಿದರೂ ಪೊಲೀಸರು ಕೇಳಲಿಲ್ಲ’ ಎಂದು ಆಕಾಶ್ ಆಕ್ರೋಶ ಹೊರ ಹಾಕಿದ್ದಾರೆ.
‘ಸೈಫ್ ಮೇಲಿನ ದಾಳಿಯ ನಂತರ ನನಗೆ ಪೊಲೀಸರಿಂದ ಕರೆ ಬಂತು. ನಾನು ಎಲ್ಲಿದ್ದೇನೆ ಎಂದು ಅವರು ನನ್ನನ್ನು ಕೇಳಿದರು. ಮನೆಯಲ್ಲೇ ಇದ್ದೇನೆ ಎಂದು ಹೇಳಿದಾಗ ಕರೆ ಕಟ್ ಆಯಿತು. ಹುಡುಗಿ ನೋಡಲು ಹೋದಾಗ ನನ್ನನ್ನು ಬಂಧಿಸಿ ರಾಯಪುರಕ್ಕೆ ಕರೆದೊಯ್ಯಲಾಯಿತು. ಮುಂಬೈ ಪೊಲೀಸರ ತಂಡ ಅಲ್ಲಿಗೆ ಬಂದು ನನ್ನನ್ನೂ ಥಳಿಸಿತು. ಆದರೆ ತನಿಖೆಯಲ್ಲಿ ಸತ್ಯ ಬಹಿರಂಗವಾದಾಗ ನನ್ನನ್ನು ಬಿಡುಗಡೆ ಮಾಡಲಾಯಿತು. ಆದರೆ ಆಗಲೇ ನನ್ನ ಜೀವನ ಹಾಳಾಯಿತು’ ಎಂದು ಆರೋಪಿಸಿದ್ದಾರೆ.
‘ಪೊಲೀಸರು ನನ್ನನ್ನು ಬಂಧಿಸಿದ ನಂತರ ನನ್ನ ಕೆಲಸದಿಂದ ವಜಾ ಮಾಡಲಾಯಿತು. ನಾನು ನನ್ನ ಬಾಸ್ಗೆ ಕರೆ ಮಾಡಿದಾಗ, ಅವರು ನನ್ನನ್ನು ಕೆಲಸಕ್ಕೆ ಬರಬೇಡಿ ಎಂದು ಹೇಳಿದರು. ಅವರು ನನ್ನ ಮಾತನ್ನು ಕೇಳಲೂ ನಿರಾಕರಿಸಿದರು. ಆಗ ನನ್ನ ಅಜ್ಜಿ ಮನೆಯವರು ಮದುವೆಯನ್ನೂ ಕ್ಯಾನ್ಸಲ್ ಮಾಡಿದ್ದಾರೆ ಅಂತ ಹೇಳಿದ್ರು. ಈಗ ಯಾರು ನನ್ನನ್ನು ನಿರ್ಣಯಿಸುತ್ತಾರೆ’ ಎಂದು ಆಕಾಶ್ ಅಳಲು ತೋಡಿಕೊಂಡರು.