ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪಿಯನ್ನು ಇಂದು ಬೆಳ್ಳಂಬೆಳಗ್ಗೆಯೇ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಬಾಂಗ್ಲಾದೇಶದ ಪ್ರಜೆಯಾಗಿದ್ದು ಆತ 5-6 ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ ಎಂದು ಡಿಸಿಪಿ ದೀಕ್ಷಿತ್ ಗೆಡಾಮ್ ಮಾಹಿತಿ ನೀಡಿದ್ದಾರೆ.
ಇಂದು ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ದೀಕ್ಷಿತ್ ಗೆಡಮ್, ಸೈಫ್ ಅಲಿಖಾನ್ ಮನೆಯಲ್ಲಿ ನಡೆದ ಕಳ್ಳತನ ಯತ್ನಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿ ಭಾರತೀಯನಲ್ಲ ಬದಲಿಗೆ ಬಾಂಗ್ಲಾದೇಶಿ ಎಂಬ ಅನುಮಾನವಿದೆ. ಬಂಧಿತನ ಬಳಿ ಭಾರತಕ್ಕೆ ಸಂಬಂಧಿಸಿದ ಯಾವುದೇ ಆಧಾರ್ ಕಾರ್ಡ್ ಅಥವಾ ಇನ್ನಿತರೆ ದಾಖಲೆಗಳು ಪತ್ತೆಯಾಗಿಲ್ಲ ಎಂದಿದ್ದಾರೆ. ಮುಂದುವರೆದು, ಆತ ತನ್ನ ಪರಿಚಯವನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಆತನ ಮೂಲ ಹೆಸರು ಬೇರೆಯದೇ ಇದೆಯೆಂಬ ಅನುಮಾನವನ್ನೂ ಸಹ ವ್ಯಕ್ತಪಡಿಸಿದ್ದಾರೆ ಪೊಲೀಸರು. ಆರೋಪಿಯ ಹೆಸರು ಮೊಹಮ್ಮದ್ ಷರೀಫುಲ್ಲಾ ಇಸ್ಲಾಂ ಶೆಹಜಾದ್ ಎಂದು ಸಹ ಮಾಹಿತಿ ಇದೆ ಎಂದು ಡಿಸಿಪಿ ದೀಕ್ಷಿತ್ ಗೆಡಾಮ್ ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯು ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದು, ಇಂದು ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಿ ಆ ನಂತರ ವಶಕ್ಕೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈಗ ಬಂಧನವಾಗಿರುವ ಆರೋಪಿ ಮುಂಬೈನ ಪಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಈತ ಇಲ್ಲಿ ಹೆಸರು ಬದಲಾವಣೆ ಮಾಡಿಕೊಂಡು ಓಡಾಡುತ್ತಿದ್ದ ಎಂದು ತಿಳಿಸಿದ್ದಾರೆ.
ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.