ತುಮಕೂರು:- ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಜರುಗಿದೆ.
ಸಾಯಿಗಂಗಾ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿಗೆ ಮಹಿಳೆ ಬಲಿಯಾಗಿರುವ ಆರೋಪ ಕೇಳಿ ಬಂದಿದೆ. 32 ವರ್ಷದ ಪುಷ್ಪ ಮೃತ ಗೃಹಿಣಿ. ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದ ಪುಷ್ಪಾಳನ್ನ ಸಾಯಿಗಂಗಾ ಆಸ್ಪತ್ರೆ ಗೆ ಪತಿ ಕರೆತಂದಿದ್ದ. ನೋವಿನಿಂದ ಬಳಲುತ್ತಿದ್ದ ಪುಷ್ಪಾಗೆ ಮಹಿಳಾ ಸಿಬ್ಬಂದಿ ಯಿಂದ ಚಿಕಿತ್ಸೆ ನೀಡಲಾಗಿದೆ. ಸಿಬ್ಬಂದಿ ಇಂಜೆಕ್ಷನ್ ನೀಡುತ್ತಿದ್ದಂತೆಯೇ ಪ್ರಜ್ಞೆ ತಪ್ಪಿ ಪುಷ್ಪಾ ಬಿದ್ದಿದ್ದಾರೆ.
ಪ್ರಜ್ಞಾ ಹೀನಾಳಾಗಿದ್ದ ಪುಷ್ಪಾಳನ್ನ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಸಾಯಿ ಗಂಗಾ ಆಸ್ಪತ್ರೆ ಸಿಬ್ಬಂದಿಗಳೇ ಆಟೋದಲ್ಲಿ ಕರೆತಂದು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದೇ ತುಮಕೂರಿಗೆ ಕಳುಹಿಸಿದ್ದರು. ಅದರಂತೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಪುಷ್ಪಾಗೆ ಚಿಕಿತ್ಸೆ ನೀಡಲಾಗಿದೆ.
ಎಂಟು ದಿನಗಳ ಕಾಲ ಪುಷ್ಪಾ ಸಾವು ಬದುಕಿನ ನಡುವೇ ಹೋರಾಟ ನಡೆಸಿದ್ದಾರೆ. ಕೋಮಾದಲ್ಲಿದ್ದ ಪುಷ್ಪಾ ಕಳೆದ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಹಿಳೆ ಸಾವಿಗೆ ಸಾಯಿಗಂಗಾ ಆಸ್ಪತ್ರೆ ಸಿಬ್ಬಂದಿ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಸಂಬಂಧಿಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ಆಸ್ಪತ್ರೆ ಮುಂದೆ ಜಮಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ.