ವಿಜಯಸಾಕ್ಷಿ ಸುದ್ದಿ, ಗದಗ: ಸ್ತ್ರೀಯರು ಸಹನಾಶೀಲರು. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರು ಅಭಿನಂದನಾರ್ಹರು. ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಮನಸ್ಸನ್ನು ಅರಿತು ಅವರ ನೋವಿಗೆ ಸ್ಪಂದಿಸಿ ಚಿಕಿತ್ಸೆ ನೀಡುವ ಚಿಂತನಜೀವಿ ವೈದ್ಯರುಗಳು ಎಂದು ರಾಜ್ಯ ಜೆಂಟ್ಸ್ ವೆಲ್‌ಫೇರ್ ಪೌಂಡೇಶನ್‌ನ ಗದಗ ಜಿಲ್ಲಾ ಘಟಕ ಸಖಿ-ಸಹೇಲಿಯ ನಿಯೋಜಿತ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ಅವರು ರವಿವಾರ ಸಖಿ-ಸಹೇಲಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜರುಗಿದ ಡಾ. ಅಪೂರ್ವ ರೇಷ್ಮೆ ಅವರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸದಾ ಕ್ರಿಯಾಶೀಲತೆಯಿಂದ ಕೆಲಸ-ಕಾರ್ಯ ನಿರ್ವಹಿಸಿ ದುಡಿಯುವ ಕ್ಷೇತ್ರದಲ್ಲಿ ಸಮರ್ಥತೆ ಸಾಧಿಸಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿಂತಕಿ ರಜನಿ ಪಾಟೀಲ ಮಾತನಾಡಿ, ಮಹಿಳೆಯರು ಸ್ವಾವಲಂಬನೆಯನ್ನು ಸಾಧಿಸಬೇಕು. ವೈದ್ಯಕೀಯ ವೃತ್ತಿ ಪವಿತ್ರವಾದದ್ದು. ರೋಗಿಗಳ ಸೇವೆಯೇ ದೇವರ ಕೆಲಸ ಎಂದು ತಿಳಿದು ನಡೆದಲ್ಲಿ ಸಾಧನೆ ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗದುಗಿನ ಚರ್ಮರೋಗ ತಜ್ಞೆ ಡಾ. ಅಪೂರ್ವ ರೇಷ್ಮೆ, ತಮ್ಮ ತಂದೆ ಗದುಗಿನ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ಶಶಿಧರ ರೇಷ್ಮೆ ಅವರ ಮಾರ್ಗದರ್ಶನ ತಮಗೆ ಸ್ಪೂರ್ತಿಯಾಗಿದ್ದು, ಮಹಿಳೆಯರು ಮನಸ್ಸು ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದರು.
ಆಶಾ ಪಟ್ಟಣಶೆಟ್ಟಿ ಸ್ವಾಗತಿಸಿದರು. ಪ್ರಿಯಾಂಕಾ ಹಳ್ಳಿ ನಿರೂಪಿಸಿದರು. ರೇಖಾ ರೊಟ್ಟಿ ಪರಿಚಯಿಸಿದರು. ಸುಶ್ಮಿತಾ ವೆರ್ಣೇಕರ ವಂದಿಸಿದರು. ಕಾರ್ಯಕ್ರಮದಲ್ಲಿ ಉಷಾ ರೇಷ್ಮೆ, ಪ್ರತಿಭಾ ಹುಬ್ಬಳ್ಳಿ, ಕಾವ್ಯ ದಂಡಿನ, ಗೀತಾ ಹೊಸಳ್ಳಿ, ಗಿರಿಜಾ ಪಾಟೀಲ ಮುಂತಾದವರಿದ್ದರು.