ಬೆಳಗಾವಿ: ಕಳೆದ ನಾಲ್ಕು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆ್ಯಂಬುಲೆನ್ಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓಂಕಾರ ಪವಾರ್ (25) ಮೃತ ಯುವಕನಾಗಿದ್ದು, ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ನ ಚಾಲಕನಾಗಿ ಓಂಕಾರ ಪವಾರ್ ಕಾರ್ಯ ನಿರ್ವಹಿಸುತ್ತಿದ್ದರು.
ಕಳೆದ ನಾಲ್ಕು ತಿಂಗಳ ಸಂಬಳ ನೀಡಿದೇ ಆಸ್ಪತ್ರೆಯವರು ಸತಾಯಿಸುತ್ತಿದ್ದರು. ಸಂಬಳಕ್ಕಾಗಿ ಮನವಿ ಮಾಡಿದ್ರೂ ಸ್ಪಂದಿಸದ ಹಿನ್ನೆಲೆಯಲ್ಲಿ ನೊಂದ ಓಂಕಾರ ಪವಾರ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಡೆತ್ ನೋಟ್ ಬರೆದಿಟ್ಟು, ಶಹಾಪುರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಲ್ಕು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಓಂಕಾರ್ ಅವರಿಗೆ ಒಂದು ಮಗು ಇದೆ. ಇನ್ನು, ಸೇಂಟ್ರಾ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕುಟುಂಬಸ್ಥರು ಮತ್ತು ಡ್ರೈವರ್ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯವರೇ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.