ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರ ‘ಭಯೋತ್ಪಾದಕ’ ಎಂದು ಘೋಷಿಸಿದೆ ಎನ್ನಲಾಗಿತ್ತು. ಇತ್ತೀಚೆಗೆ ಸಲ್ಮಾಣ್ ಸೌದಿ ಅರೇಬಿಯಾದಲ್ಲಿ ನಡೆದ “Joy Forum 2025” ಕಾರ್ಯಕ್ರಮದಲ್ಲಿ ಮಾತನಾಡುವಾಗ, “ಬಲೋಚಿಸ್ತಾನ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನ್‌ನ ಜನರು ಇಲ್ಲಿದ್ದಾರೆ” ಎಂದು ಉಲ್ಲೇಖಿಸಿದ್ದರು. ಈ ಹೇಳಿಕೆಯ ನಂತರ, ಅಸಮಾಧಾನಗೊಂಡ ಪಾಕಿಸ್ತಾನದ ಸರ್ಕಾರವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಸಲ್ಮಾನ್ ಅವರನ್ನು ನೇರವಾಗಿ ಭಯೋತ್ಪಾದಕ ಎಂದು ಘೋಷಿಸಿದೆ ಎಂದು ವರದಿ ಆಗಿತ್ತು. ಆದರೆ, ಇದು ಸುಳ್ಳು ಸುದ್ದಿ ಎನ್ನಲಾಗಿದೆ.
ಸಲ್ಮಾನ್ ಖಾನ್ ಹೇಳಿಕೆಯನ್ನು ಪಾಕಿಸ್ತಾನದ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಮಾಧ್ಯಮಗಳು ತಪ್ಪಾಗಿ ಅರ್ಥೈಸಿ, ಸಲ್ಮಾನ್ ಖಾನ್ ಅವರನ್ನು “ಟೆರರಿಸ್ಟ್” ಎಂದು ಕರೆದಿದ್ದಾರೆ ಎಂಬ ವದಂತಿ ಹರಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ #BoycottSalmanKhan ಮತ್ತು #BalochistanRemark ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ರೆಂಡ್ ನಡೆಸಲಾಗಿತ್ತು.
ಕೆಲವು ವರದಿಗಳ ಪ್ರಕಾರ, ಪಾಕಿಸ್ತಾನದ ಆಂಟಿ-ಟೆರರಿಸಮ್ ಕಾಯಿದೆ 1997ರ ನಾಲ್ಕನೇ ಶೆಡ್ಯೂಲ್‌ನಲ್ಲಿ ಸಲ್ಮಾನ್ ಖಾನ್ ಅವರ ಹೆಸರು ಸೇರಿಸಲಾಗಿದೆ ಎಂಬ ಅಸತ್ಯದ ಡಾಕ್ಯುಮೆಂಟ್‌ಗಳು ಹರಿದಾಡುತ್ತಿದ್ದವು. ಆದರೆ, ಇದು ಸುಳ್ಳು ಎಂಬುದು ಸ್ಪಷ್ಟವಾಗಿದೆ. ಫೇಕ್ ನೋಟಿಫಿಕೇಷನ್ಗಳನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿ ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಸಲ್ಮಾನ್ ಖಾನ್ ಅವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿರುವ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಒಂದೊಮ್ಮೆ ಪಾಕಿಸ್ತಾನ ಈ ರೀತಿ ಘೋಷಣೆ ಮಾಡಿದ್ದರೂ, ಪಾಕಿಸ್ತಾನದ ಕಾನೂನಿಗೆ ಭಾರತದಲ್ಲಿ ಯಾವುದೇ ನ್ಯಾಯವ್ಯಾಪ್ತಿ ಇಲ್ಲ. ಆದ್ದರಿಂದ, ಪಾಕಿಸ್ತಾನದಲ್ಲಿ ಸಲ್ಮಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದರೂ ಅವರನ್ನು ಬಂಧಿಸಲಾಗುವುದಿಲ್ಲ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಆಯೋಜಿಸಲಾದ ‘ಜಾಯ್ ಫೋರಮ್ 2025′ ನಲ್ಲಿ ನಟ ಸಲ್ಮಾನ್ ಖಾನ್ ಉಪಸ್ಥಿತರಿದ್ದರು. ಈ ವೇಳೆ ಅವರು ಮಾತನಾಡುವಾಗ ‘ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ ಅದು ಸೂಪರ್ ಹಿಟ್ ಆಗುತ್ತದೆ. ತಮಿಳು, ತೆಲುಗು ಅಥವಾ ಮಲಯಾಳಂನಲ್ಲಿ ಸಿನಿಮಾ ಮಾಡಿದರೆ ನೂರಾರು ಕೋಟಿ ಗಳಿಸಬಹುದು. ಏಕೆಂದರೆ ಬೇರೆ ಬೇರೆ ಭಾಷೆಯ ಜನರು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಕೆಲಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ’ ಎಂದು ಹೇಳಿದ್ದರು. ಅವರು ಪಾಕಿಸ್ತಾನ ಹಾಗೂ ಬಲೂಚಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದು ಚರ್ಚೆಗೆ ಕಾರಣವಾಗಿತ್ತು.



