ಏ.19ರಿಂದ`ಸಮಾನತೆ ರಥಯಾತ್ರೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಏ.19ರಿಂದ 15 ದಿನಗಳ ಕಾಲ `ಸಮಾನತೆ ರಥಯಾತ್ರೆ’ ನಡೆಸಲಾಗುವುದು. ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಏ.19ರ ಮಧ್ಯಾಹ್ನ 3ಕ್ಕೆ ಯಾತ್ರೆಗೆ ಚಾಲನೆ ನೀಡಲಾಗುವುದು. ಗ್ರಾಮಗಳಲ್ಲಿಯೂ ಈ ರಥಯಾತ್ರೆ ಜರುಗಲಿದೆ. ಪ್ರತಿಯೊಂದು ದಿನ ವಾಲ್ಮೀಕಿ ರಾಮಾಯಣ, ಭಜನೆ, ಡಾ. ಅಂಬೇಡ್ಕರರ ಸಿದ್ಧಾಂತಗಳ ಚರ್ಚೆ ಸೇರಿದಂತೆ ಹಲವು ವಿಷಯಗಳು ಚರ್ಚೆ ನಡೆಸಲಾಗುವುದು. ಪ್ರತಿ ದಿನ ಸಂಜೆ ಬುತ್ತಿ ಜಾತ್ರೆ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾನತೆ ಮಂದಿರ ನಿರ್ಮಾಣಕ್ಕೆ ಕುರ್ತಕೋಟಿ ಗ್ರಾಮದಲ್ಲಿ ಸ್ಥಳೀಯರು ಎರಡು ಎಕರೆ ಜಮೀನು ದಾನವಾಗಿ ಕೊಟ್ಟಿದ್ದಾರೆ. ಈ ಸಂಕಲ್ಪ ನೆರವೇರಿಸಲು ಗದಗ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ ಹಲವಾರು ದಾನಿಗಳು ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದುರು.

ಸಮಾನತೆ ರಥಯಾತ್ರೆಯು ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ರಾಜಕೀಯ ಹೊರತುಪಡಿಸಿ ಈ ರಥಯಾತ್ರೆ ನಡೆಸಲಾಗುವುದು. ರಥಯಾತ್ರೆ ಜತೆಗೆ ಬುತ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿವಿಧ ಗ್ರಾಮದಿಂದ ಬುತ್ತಿಯನ್ನು ಸಮರ್ಪಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಈ ಯಾತ್ರೆಗೆ ಪಕ್ಷಾತೀತ, ಧರ್ಮಾತೀತವಾಗಿ ಎಲ್ಲರಿಗೂ ಆಹ್ವಾನ ಇದೆ ಎಂದು ಅನಿಲ ಮೆಣಸಿನಕಾಯಿ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದು ಪಲ್ಲೇದ ಮಾತನಾಡಿ, ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳು ಜರುಗಿವೆ. ಕಳೆದ ವರ್ಷ ಅಂಬೇಡ್ಕರ್ ಜಯಂತಿ ದಿನದಂದೇ ಸಮಾನತೆ ಮಂದಿರ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಸಮಾನತೆ ಪ್ರತಿಷ್ಠಾನದ ವತಿಯಿಂದ ಸಮಾನತೆ ರಥಯಾತ್ರೆ 15 ದಿನಗಳ ಕಾಲ ಜಿಲ್ಲೆಯಾದ್ಯಂತ ನಡೆಯಲಿದೆ. ಕನಕದಾಸ, ಶಿಶುನಾಳ ಷರೀಫ ಸೇರಿದಂತೆ ಹಲವು ದಾರ್ಶನಿಕರ, ಮಹನೀಯರ ಪ್ರತಿಮೆಗಳ ಮೆರವಣಿಗೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪರಮೇಶ ಲಮಾಣಿ, ಸಿದ್ದು ಪಲ್ಲೇದ, ಮಂಜುನಾಥ ಮ್ಯಾಗೇರಿ, ವಸಂತ ಪಡಗದ, ಶರಣಪ್ಪ ಚಿಂಚಲಿ ಮುಂತಾದವರಿದ್ದರು.

ಸಮಾನತೆ ರಥಯಾತ್ರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ದಾಸರು, ಶಿಶುನಾಳ ಶರೀಫರು ಸೇರಿದಂತೆ ಹಲವರ ಪ್ರತಿಮೆಗಳ ಮೆರವಣಿಗೆ ಮಾಡಲಾಗುವುದು. ಜಯಂತಿ ಮಾಡುವ ಮೂಲಕ ಕೇವಲ ಅವರ ಜಯಂತಿಯ ದಿನವಷ್ಟೇ ಮಹನೀಯರನ್ನು ಸ್ಮರಣೆ ಮಾಡಲಾಗುತ್ತದೆ. ಆದರೆ, ಅವರ ಸ್ಮರಣೆ ನಿತ್ಯ ನಿರಂತರ ಆಗಬೇಕು. ಈ ಮಂದಿರವು ಕೇವಲ ಪೂಜಾ ಸ್ಥಾನವಾಗಿ ಮಾಡುತ್ತಿಲ್ಲ. ಇಲ್ಲಿ ಜ್ಞಾನವನ್ನು ಪಸರಿಸುವ ಕಾರ್ಯಕ್ಕೆ ನಾಂದಿ ಹಾಡಲಾಗುತ್ತಿದೆ. ಹಾಗಾಗಿ ಮಂದಿರ ನಿರ್ಮಾಣದ ಅನಿವಾರ್ಯತೆಯಿದೆ.

– ಅನಿಲ ಮೆಣಸಿನಕಾಯಿ.

ಬಿಜೆಪಿ ಮುಖಂಡರು.


Spread the love

LEAVE A REPLY

Please enter your comment!
Please enter your name here